ಧರ್ಮಸ್ಥಳ ಪ್ರಕರಣ ಸಂಬಂಧ, ಇಲ್ಲಿಯವರೆಗೆ 30ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆಯಂತೆ. ಅವುಗಳಲ್ಲಿ ಅರ್ಹ ದೂರುಗಳ ಸಮಗ್ರ ತನಿಖೆಗೆ, ಎಸ್‌ಐಟಿ ಮುಂದಾಗಿದೆ. ಅವುಗಳಲ್ಲಿ ನಾಪತ್ತೆ ಪ್ರಕರಣಗಳು, ಅಸಹಜ ಸಾವುಗಳು, ಶಂಕಿತ ಕೊಲೆ ಪ್ರಕರಣಗಳು, ಮೃತದೇಹಗಳನ್ನು, ಅಕ್ರಮವಾಗಿ ವಿಲೇವಾರಿ ಮಾಡಿರುವ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ಹಾಗೂ ಪೊಲೀಸರು ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದಾರೆಂದು, ಹಲವರು ಕಂಪ್ಲೇಂಟ್ ಕೊಟ್ಟಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಸಂಚು ರೂಪಿಸಲಾಗಿದೆ. ಇದಕ್ಕೆ ವಿದೇಶಗಳಿಂದ ಫಂಡಿಂಗ್ ಮಾಡಲಾಗಿದೆ ಅಂತಾ, ಇನ್ನೂ ಕೆಲವರು ದೂರು ನೀಡಿದ್ದಾರೆ.
ಪ್ರಕರಣದ ತನಿಖಾ ಪ್ರಗತಿ ಹಾಗೂ ಸಲ್ಲಿಕೆಯಾಗಿರುವ ದೂರುಗಳ ವಿಲೇವಾರಿ ಕುರಿತು, ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಸೆಪ್ಟೆಂಬರ್ 14ರಂದು ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ್ದಾರೆ. ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮಾ, ಸಿ.ಎ. ಸೈಮನ್ ಸೇರಿದಂತೆ ಹಲವು ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ರು. ಕೆಲ ದೂರುಗಳ ಬಗ್ಗೆ ಈಗಾಗಲೇ ತನಿಖಾಧಿಕಾರಿಗಳು, ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಅವುಗಳಲ್ಲಿ ತನಿಖೆಗೆ ಯೋಗ್ಯವಾದ ದೂರುಗಳು ಯಾವುವು?. ಯಾವ ದೂರುಗಳಿಗೆ ಸಮಗ್ರ ತನಿಖೆಯ ಅಗತ್ಯವಿದೆ. ಯಾವ ದೂರುಗಳನ್ನ ಮುಕ್ತಾಯಗೊಳಿಸಬಹುದು ಎಂಬ ಬಗ್ಗೆ ಚರ್ಚಿಸಲಾಗಿದೆ.
ಮೊಹಾಂತಿ ಅವರ ಮಹತ್ವದ ಸಭೆಯಲ್ಲಿ ತನಿಖೆಯ ಅಂತಿಮ ವರದಿ ಬಗ್ಗೆಯೂ ಚರ್ಚಿಸಲಾಗಿದೆ. ತನಿಖೆಯ ವೇಗ ಹೆಚ್ಚಿಸಿ, ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿ, ಶೀಘ್ರವೇ ತನಿಖೆ ಪೂರ್ಣಗೊಳಿಸುವಂತೆ, ಅಧಿಕಾರಿಗಳಿಗೆ ಮೊಹಾಂತಿ ಸೂಚಿಸಿದ್ದಾರೆ. ಜೊತೆಗೆ ಬುರುಡೆ ಬಗ್ಗೆ ಸೌಜನ್ಯ ಮಾವ ವಿಠಲ್ ಗೌಡ ಹೇಳಿಕೆ, ಗಂಭೀರ ಸ್ವರೂಪ ಪಡೆದುಕೊಂಡಿದೆ. ಚಿನ್ನಯ್ಯ ಮಾದರಿಯಲ್ಲೇ ವಿಠಲ್ ಗೌಡ ಹೇಳಿಕೆ ಕೊಡ್ತಿದ್ದಾರೆ. ಹೀಗಾಗಿ ಬಂಗ್ಲಗುಡ್ಡದಲ್ಲಿ ಉತ್ಖನನ ನಡೆಸಬೇಕಾ? ಬೇಡ್ವಾ? ಎಂಬ ಬಗ್ಗೆಯೂ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆಯಂತೆ.