ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿ ಬಿದ್ದಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಹೊಸ ಸಂಕಷ್ಟ ಶುರುವಾಗಿದೆ.
2007ರಲ್ಲಿ ಸಿಎಂ ಆಗಿದ್ದ ವೇಳೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಎಸ್ಎಸ್ವಿಎಂ ಕಂಪನಿಗೆ ಗಣಿ ಮತ್ತು ಖನಿಜ ನಿಯಮಳನ್ನು ಉಲ್ಲಂಘಿಸಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವನ್ನು ಕುಮಾರಸ್ವಾಮಿ ಅವರು ಎದುರಿಸುತ್ತಿದ್ದಾರೆ.
ಈ ಆರೋಪದಡಿ ಹೆಚ್ಡಿಕೆ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಮತ್ತೆ ಪ್ರಸ್ತಾವ ಸಲ್ಲಿಸಿದೆ. 2011ರಲ್ಲಿ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾಣಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿನ ಉಲ್ಲೇಖ ಆಧರಿಸಿ ಲೋಕಾಯುಕ್ತ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ.
ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಯ ಮನವಿ ದೀರ್ಘ ಕಾಲದಿಂದ ರಾಜ್ಯಪಾಲರ ಬಳಿಯಲ್ಲೇ ಇದೆ. ಜುಲೈ 29ರ ದಿನಾಂಕ ಉಲ್ಲೇಖಿಸಿ ರಾಜ್ಯಪಾಲರು ಬರೆದಿದ್ದ ಪತ್ರವೊಂದು ಆಗಸ್ಟ್ 8ರಂದು ಎಸ್ಐಟಿಗೆ ತಲುಪಿತ್ತು. ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಎಸ್ಐಟಿ ಮುಖ್ಯಸ್ಥರು ಕೋರಿದ್ದ ಸ್ಪಷ್ಟನೆಗಳಿಗೆ ಉತ್ತರಗಳೊಂದಿಗೆ ಸೋಮವಾರ ಸಂಜೆ ಪತ್ರವೊಂದನ್ನು ರಾಜಭವನಕ್ಕೆ ರವಾನಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.