ಹೈದರಾಬಾದ್ನ ನಾಂಪಲ್ಲಿಯ ಒಂದು ಪಾಳು ಬಿದ್ದ ಮನೆಯಲ್ಲಿ ಹಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಹೈದರಾಬಾದ್ನ ನಾಂಪಲ್ಲಿಯ ಪುರಾತನ ಮಾರುಕಟ್ಟೆ ಪ್ರದೇಶದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್ ಆಟದ ನಡುವೆ ಬಾಲ್ ಹುಡುಕಲು ಹೋಗಿದ್ದ ಯುವಕನೊಬ್ಬ ಅಸ್ಥಿಪಂಜರವನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಅದನ್ನು ನೋಡಿ ತಕ್ಷಣ ಮೊಬೈಲ್ನಲ್ಲಿ ವಿಡಿಯೋ ತೆಗೆದಿದ್ದಾನೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ನಂತರ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ರು. ಮನೆ ಯಾವುದೇ ದ್ವಾರವಿಲ್ಲದೆ, ತುಂಬಾ ಕಾಲದಿಂದ ಮುಚ್ಚಲ್ಪಟ್ಟಂತಿತ್ತು. ಅಸ್ಥಿಪಂಜರವು ಅಡುಗೆ ಕೋಣೆಯಲ್ಲಿ ಪತ್ತೆಯಾಯಿತು. ಕಡೆಯಿಂದ ನೆಲಕ್ಕೆ ಕುಸಿದು ಬಿದ್ದ ಸ್ಥಿತಿಯಲ್ಲಿ ಅದು ಇತ್ತು.ಈ ಮೃತದೇಹ ಹತ್ತು ವರ್ಷಗಳ ಹಿಂದಿನದು ಆಗಿರುವ ಸಾಧ್ಯತೆಯಿದೆ ಅಂತ ತಿಳಿದು ಬಂದಿದೆ.
ಪೊಲೀಸರು ಮನೆ ಮಾಲಿಕನನ್ನು ಗುರುತಿಸಿದ್ದು ಆತನ ಹೆಸರು ಮುನೀರ್ ಖಾನ್. ಆತನಿಗೆ ಹತ್ತು ಮಕ್ಕಳು ಇದ್ದು, ಮೂರನೇ ಮಗ ಅಮೀರ್ ಖಾನ್ ಈ ಪಾಳು ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದನು. ಅವನು ಸುಮಾರು 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದನು ಎಂದಿದ್ದಾರೆ.
ಅಸ್ಥಿಪಂಜರದ ಹತ್ತಿರ ಹಳೆಯ ನೋಕಿಯಾ ಸೆಟ್ ಫೋನ್, 2016ರಲ್ಲಿ ರದ್ದಾದ ನೋಟುಗಳು ಮತ್ತು ಕೆಲ ಪಾತ್ರೆಗಳು ಪತ್ತೆಯಾಗಿವೆ. ಫೋನ್ ಬ್ಯಾಟರಿ ಸಂಪೂರ್ಣ ಖಾಲಿಯಾಗಿತ್ತು. ತಜ್ಞರು ಅದನ್ನು ಮರುಚಲಾಯಿಸಿ ಪರಿಶೀಲಿಸಿದಾಗ 2015 ರಲ್ಲಿ 84 ಮಿಸ್ಡ್ ಕಾಲ್ಗಳು ಇದ್ದವು ಎಂಬುದು ಬೆಳಕಿಗೆ ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಅಮೀರ್ 2015ರ ಕೊನೆಯವರೆಗೂ ಬದುಕಿದ್ದಿರಬಹುದು ಎಂದು ಶಂಕಿಸುತ್ತಿದ್ದಾರೆ.
ಅಸ್ಥಿಪಂಜರದ ಹತ್ತಿರ ಒಂದು ಬೆರಳಿನ ಉಂಗುರ ಮತ್ತು ಒಳಉಡುಪು ಪತ್ತೆಯಾಗಿದ್ದು, ಪೊಲೀಸರು ಇನ್ನಷ್ಟು ದೃಢೀಕರಣಕ್ಕಾಗಿ ವಿಧಿವಿಜ್ಞಾನ ತಂಡವನ್ನು ಕರೆದು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹದಲ್ಲಿ ಯಾವುದೇ ಹಲ್ಲೆ ಚಿಹ್ನೆಗಳಿಲ್ಲ. ಯಾವುದೇ ರಕ್ತದ ಕಲೆಗಳಿಲ್ಲ. ಹೀಗಾಗಿ ಇದು ಸಹಜ ಸಾವು ಆಗಿರುವ ಸಾಧ್ಯತೆಯಿದೆ ಎಂಬುದು ಪೋಲಿಸರ ಪ್ರಾಥಮಿಕ ತನಿಖೆಯಿಂದ ಅಭಿಪ್ರಾಯ ಪಟ್ಟಿದ್ದಾರೆ.


