ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೀಟರ್ ದಂಧೆ ದೊಡ್ಡಮಟ್ಟದ ಬೇರು ಬಿಟ್ಟಿದೆ. ಅದೆಷ್ಟೋ ಬಡ ಕುಟುಂಬಗಳು ಮೀಟರ್ ಬಡ್ಡಿ ದಂಧೆಗೆ ಜೀವವನ್ನೆ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೀಗಿದ್ದರೂ ಕೂಡ ಮೀಟರ್ ಬಡ್ಡಿ ದಂಧೆಯ ಕರಾಳತೆ ಮಾತ್ರ ಕಡಿಮೆಯಾಗಿಲ್ಲ.
ಸಾಲಗಾರರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು ಜಮಖಂಡಿ ಮೂಲದ ಸುಜಿತ್ ಗುಳ್ಳಾದ್ ಎಂದು ಗುರುತಿಸಲಾಗಿದ್ದು, ಕಂಪ್ಯೂಟರ್ ಸೇಲ್ಸ್ ಆ್ಯಂಡ್ ಸರ್ವಿಸಸ್ ಬಿಸಿನೆಸ್ ನಡೆಸುತ್ತಿದ್ದರು. ಸುಜಿತ್ ಬಿಸಿನೆಸ್ ನಡೆಸಲು ಸಾಕಷ್ಟು ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದ್ದು, ಸಾಲ ತೀರಿಸಲು ಸಾಲಗಾರರಿಂದ ವಾರದ ಬಡ್ಡಿ ಮೇಲೆ ಹಣ ಪಡೆದಿದ್ದರು, ಸಾಲ ಮರುಪಾವತಿ ಮಾಡದೆ ಸಾಲಗಾರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಸುಜಿತ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೂ ಸುಜಿತ್ ಸಾಲದ ಹಣವನ್ನು ಮರುಪಾವತಿ ಮಾಡದಿದ್ದಾಗ, ಸಾಲ ನೀಡಿದವರು ಕಿರುಕುಳ ನೀಡಲು ಪ್ರಾರಂಭಿಸಿದ್ದರು, ಸಾಲಗಾರರ ಕಿರುಕುಳವನ್ನು ಸಹಿಸಲಾಗದ ಸುಜಿತ್ ಅವರು ತಮ್ಮ ಸಾವಿಗೆ ಸಾಲ ಕೊಟ್ಟವರ ಅವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೋಲಿಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಕೇಶ್ವಾಪೂರ್ ಪೋಲಿಸ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೊಲೀಸ್ ಕಮೀಷನರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗುದ್ದರು ಕೂಡ ಮೀಟರ್ ಬಡ್ಡಿ ದಂಧೆಯ ಕರಾಳತೆ ಮಾತ್ರ ಕಡಿಮೆಯಾಗಿಲ್ಲ.