ಬೆಂಗಳೂರು : ನನಗೆ ಯಾರೂ ಬೆದರಿಕೆ ಹಾಕಿಲ್ಲ. ಅಂತಹ ಯಾವುದೇ ಘಟನೆ ನಡೆದೇ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಸಿಎಂ ಹುದ್ದೆಯ ವಿಚಾರದಲ್ಲಿ ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿದ್ದರು ಎಂಬ ಕಾರಣಕ್ಕಾಗಿ ಅವರಿಗೆ ಬೆದರಿಕೆ ಹಾಕಲಾಗಿದೆ. ಮಾಜಿ ಸಂಸದ ಡಿಕೆ ಸುರೇಶ್ ಕಡೆಯಿಂದ ಬೆದರಿಕೆ ಕರೆ ಬಂದಿದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿದ್ದವು.
ಇನ್ನೂ ಈ ವದಂತಿಗಳನ್ನು ಅಲ್ಲಗಳೆದಿರುವ ಮಹದೇವಪ್ಪ, ನಾನು ಡಿಕೆ ಸುರೇಶ್ ಜೊತೆ ಫೋನಲ್ಲಿ ಮಾತನಾಡೇ ಇಲ್ಲ. ಅಂತದ್ದೇನೂ ನಡೆದಿಲ್ಲ. ಸುರೇಶ್ ಎಂದಿಗೂ ಫೋನ್ ಮಾಡಿಲ್ಲ. ಇದೆಲ್ಲ ಆಗಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಈ ರೀತಿಯಾಕೆ ಮಾಡುತ್ತಾರೆ? ಸುಖಾ ಸುಮ್ಮನೇ ಹೀಗೆ ಮಾಹಿತಿ ಪಸರಿಸುವುದರಿಂದ ಸಮಾಜ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಮಹದೇವಪ್ಪ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಸಿಎಂ ಪರವಾಗಿದ್ದರು. ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿಯೇ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಚರ್ಚೆಗಳು ನಡೆಯುತ್ತಿದ್ದವು. ಆದರೆ ಇದೀಗ ಈ ಎಲ್ಲ ವದಂತಿ, ಸುದ್ದಿಗಳಿಗೆ ಖುದ್ದು ಮಹದೇವಪ್ಪ ಅವರೇ ಬ್ರೇಕ್ ಹಾಕಿದ್ದಾರೆ.