ರಾಜ್ಯದ ಗೃಹಲಕ್ಷ್ಮಿಯರಿಗೆ ಮತ್ತೊಂದು ಗುಡ್‌ನ್ಯೂಸ್. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇನ್ನಷ್ಟು ಲಾಭ ತಂದುಕೊಡುವ ಉದ್ದೇಶದಿಂದ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಈ ಸೊಸೈಟಿಯನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಅವರು ಘೋಷಿಸಿದರು. ಬೆಂಗಳೂರಿನ ಡಾ. ಬಾಬು ಜಗಜೀವನರಾಮ್ ಆಡಿಟೋರಿಯಂನಲ್ಲಿ ನಡೆದ ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವ ಮತ್ತು ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆಗೆ ಪೂರ್ವಭಾವಿ ಸಭೆಯಲ್ಲಿ ಸಚಿವೆ ಮಾತನಾಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರು, ವಿಶ್ವದಲ್ಲೇ ಅತಿದೊಡ್ಡದಾದ ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈಗ ಅದೇ ಮಾದರಿಯಲ್ಲಿ ಗೃಹಲಕ್ಷ್ಮಿ ಬ್ಯಾಂಕ್ ಮತ್ತು ಸೊಸೈಟಿಯೂ ಜನಮನ್ನಣೆ ಗಳಿಸಬೇಕೆಂಬುದು ನಮ್ಮ ಆಶಯ. ಸೊಸೈಟಿ ಮೂಲಕ ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು” ಎಂದು ತಿಳಿಸಿದ್ದಾರೆ. ಫಲಾನುಭವಿಗಳಿಂದಲೇ ಫೋನ್ ಪೇ ಮೂಲಕ ಹಣ ಸಂಗ್ರಹಿಸುವ ಮೂಲಕ ಪಾರದರ್ಶಕ ವ್ಯವಹಾರ ನಡೆಯಲಿದೆ ಎಂದೂ ಹೇಳಿದರು.
ಕರ್ನಾಟಕದ ಮಹಿಳೆಯರಿಗೆ ಶಕ್ತಿ ತುಂಬುವುದೇ ನನ್ನ ಇಲಾಖೆಯ ಗುರಿ. ಮುಂದಿನ ದಿನಗಳಲ್ಲಿ ಇಲಾಖೆಯನ್ನು ನಂಬರ್ ಒನ್ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನಂತೆ ಈ ಸೊಸೈಟಿಯೂ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಸೊಸೈಟಿಯ ಯಶಸ್ಸಿಗೆ ಅಧಿಕಾರಿಗಳು ಮತ್ತು ಫಲಾನುಭವಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಮಹಿಳೆಯರ ಸುರಕ್ಷತೆಗೆ ಅಕ್ಕ ಪಡೆ ಎಂಬ ಹೊಸ ಯೋಜನೆಯೂ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರಾರಂಭವಾಗಲಿದೆ. ಹೋಮ್ ಗಾರ್ಡ್ಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಈ ಪಡೆಯ ಭಾಗವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶಾಲೆ, ಕಾಲೇಜು, ಪಾರ್ಕ್ ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಗಸ್ತು ತಿರುಗಲಿದ್ದಾರೆ. ಡೀಪ್ ಫೇಕ್ ಹಾವಳಿಯಿಂದ ಮಹಿಳೆಯರು ಬಲಿಯಾಗದಂತೆ ತಡೆಗಟ್ಟಲು ಅಕ್ಕ ಪಡೆ ಜಾಗೃತಿ ಮೂಡಿಸುವ ಕೆಲಸವೂ ಕೈಗೊಳ್ಳಲಿದೆ. ಮನೆಮನೆಗೆ ತೆರಳಿ ಮಹಿಳೆಯರ ಭದ್ರತೆ ಕುರಿತ ಅರಿವು ಮೂಡಿಸುವ ಗುರಿಯೂ ಅಕ್ಕ ಪಡೆಯದು.
ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ, ಸೊಸೈಟಿ ಮತ್ತು ಅಕ್ಕ ಪಡೆ, ಈ ಮೂರು ಹೊಸ ಹೆಜ್ಜೆಗಳು ರಾಜ್ಯದ ಮಹಿಳೆಯರಿಗೆ ಶಕ್ತಿ, ಭದ್ರತೆ ಮತ್ತು ಆರ್ಥಿಕ ಸ್ವಾವಲಂಬನೆ ನೀಡುವ ದಿಕ್ಕಿನಲ್ಲಿ ಮಹತ್ವದ ಬದಲಾವಣೆಯಾಗಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

