ನೆಲಮಂಗಲಕ್ಕೆ ಸೋಲೂರು.. ಕೊನೆಗೂ ಶ್ರೀನಿವಾಸ್ ಗೆದ್ದರು

47 ವರ್ಷಗಳಿಂದ ಆಡಳಿತಾತ್ಮಕವಾಗಿ ಅತಂತ್ರವಾಗಿದ್ದ ಸೋಲೂರು ಹೋಬಳಿಯನ್ನು, ನೆಲಮಂಗಲ ತಾಲೂಕಿನ ಮಡಿಲಿಗೆ ಸೇರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಸೋಲೂರು ಹೋಬಳಿಯ ಜನರು, ಮತದಾನ ಹಾಗೂ ಆಡಳಿತಾತ್ಮಕ ಎಲ್ಲಾ ಕೆಲಸಗಳು ಮಾಗಡಿ ತಾಲೂಕಿಗೆ ಹೋಗಬೇಕಾಗಿತ್ತು. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ, ಸೋಲೂರು ಜನರು ಸೋತು ಹೋಗಿದ್ರು.

ಪ್ರತಿ ಚುನಾವಣೆಯಲ್ಲಿ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಭರವಸೆ ಸಿಗುತ್ತಿದ್ದರೂ, ಗೆದ್ದ ಬಳಿಕ ಜನಪ್ರತಿನಿಧಿಗಳು ಸೈಲೆಂಟ್‌ ಆಗ್ತಿದ್ರು. ಈ ಬಾರಿ ಶಾಸಕ ಎನ್‌. ಶ್ರೀನಿವಾಸ್‌ ನುಡಿದಂತೆ ನಡೆದುಕೊಂಡಿದ್ದಾರೆ. ಸಚಿವ ಸಂಪುಟದಲ್ಲಿಅನುಮೋದನೆ ಮಾಡಿಸುವ ಮೂಲಕ, ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾಗಿದ್ದಾರೆ.

1978ರಿಂದ 1987ವರೆಗೂ ಕುದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿ ಸೋಲೂರು ಅತಂತ್ರವಾಗಿತ್ತು. 1988ರ ನಂತರ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿತು. ಆದರೆ ಆಡಳಿತಾತ್ಮಕ ಕೆಲಸಗಳು ಮಾಗಡಿ ತಾಲೂಕಿನಲ್ಲಿಯೇ ಉಳಿದುಕೊಂಡಿತ್ತು.

ಮಾಗಡಿ ತಾಲೂಕಿನ ಅಧಿಕಾರಿಗಳು ಈ ಹಿಂದೆ, ಸೋಲೂರು ಗ್ರಾಮಗಳಿಗೆ ಭೇಟಿಯೇ ನೀಡುತ್ತಿರಲಿಲ್ಲ. ಸೋಲೂರು ಹೋಬಳಿಗೆ ಬಾರದೆ ವರ್ಗಾವಣೆಯಾದ, 40ಕ್ಕೂ ಹೆಚ್ಚು ಇಲಾಖೆಯ ನೂರಾರು ಮೇಲಾಧಿಕಾರಿಗಳು ಇದ್ದಾರೆ. ಕನಿಷ್ಠ ಆಸ್ಪತ್ರೆಯ ಕೆಲಸವೂ ಆಗುತ್ತಿರಲಿಲ್ಲ. ಇರುವ ಅಧಿಕಾರಿಗಳು ಶಾಸಕರು, ಸಂಸದರ ಮಾತು ಕೇಳುತ್ತಿರಲಿಲ್ಲ. ಪರಿಣಾಮ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಜನಸಾಮಾನ್ಯರು, ಸರ್ಕಾರಿ ಕಚೇರಿಗಳಿಗೆ ದಿನನಿತ್ಯ ಅಲೆದಾಡಬೇಕಿತ್ತು.

ಈಗ ನೆಲಮಂಗಲಕ್ಕೆ ಸೋಲೂರು ಸೇರುವ ಮೂಲಕ , ಸಾವಿರಾರು ಜನರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ. ಸೋಲೂರಿಗೆ ತಟ್ಟಿದ್ದ ಶಾಪಕ್ಕೆ, ಶಾಸಕ ಎನ್‌. ಶ್ರೀನಿವಾಸ್‌ರಿಂದ ವಿಮೋಚನೆ ಸಿಕ್ಕಿದೆ ಅಂತಾ, ಜನರು ಹೇಳ್ತಿದ್ದಾರೆ.

About The Author