ಸೋಮಣ್ಣ ವಿರುದ್ಧ ಅಪಸ್ವರ – ತುಮಕೂರು ಬಿಜೆಪಿ ಇಬ್ಭಾಗ?

ತುಮಕೂರು ಜಿಲ್ಲಾ ಬಿಜೆಪಿಯಲ್ಲಿ, ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಳ್ತಿದೆ. ನಾಯಕರ ನಡುವೆ, ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳದಷ್ಟು, ಕಂದಕ ಸೃಷ್ಟಿಯಾಗಿದೆ. ನಾಯಕರ ನಡುವಿನ ಪ್ರತಿಷ್ಠೆಯಿಂದಾಗಿ ಕಾರ್ಯಕರ್ತರು ಹತಾಶರಾಗಿದ್ದು, ಯಾವ ಗುಂಪಿನಲ್ಲಿ ಗುರುತಿಸಿಕೊಳ್ಳಬೇಕೆಂಬ, ಗೊಂದಲಕ್ಕೆ ಸಿಲುಕಿದ್ದಾರೆ. ಒಂದು ಗುಂಪಿನಲ್ಲಿ ಗುರುತಿಸಿಕೊಂಡ್ರೆ, ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ. ಇದೇ ರೀತಿ ಗೊಂದಲದ ಪರಿಸ್ಥಿತಿ ಮುಂದುವರೆದ್ರೆ, ಮುಂದಿನ ದಿನಗಳಲ್ಲಿ ಏನ್‌ ಮಾಡಬೇಕೆಂಬ ಸಂದಿಗ್ಧ ಸ್ಥಿತಿಯಲ್ಲೇ ಇದ್ದಾರೆ.

ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ದಿನಾಚರಣೆಯನ್ನು, ಪ್ರತ್ಯೇಕವಾಗಿ ಆಚರಿಸುವ ಮೂಲಕ, ಬಣ ರಾಜಕೀಯ ಬೀದಿಗೆ ಬಂದಿದೆ. ಜಿಲ್ಲಾ ಘಟಕದಿಂದ ವಿಶ್ವವಿದ್ಯಾಲಯದ ಎದುರು, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ವಿ. ಸೋಮಣ್ಣ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕರ್ತರಿಗೆ ಎರಡೂ ಬಣದಿಂದಲೂ ಆಹ್ವಾನ ಬಂದಿದೆ. ಹೀಗಾಗಿ ಏನು ಮಾಡಬೇಕೆಂಬ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ವಿ. ಸೋಮಣ್ಣ ಕೇಂದ್ರ ಸಚಿವರಾಗುವತನಕ ಎಲ್ಲವೂ ಸಹಜವಾಗೇ ನಡೆದುಕೊಂಡು ಹೋಗ್ತಿತ್ತು. ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಕಾರ್ಯಕರ್ತರು ಒಟ್ಟಾಗಿಯೇ ಕೆಲಸ ಮಾಡಿದ್ರು. ಆದರೆ ಇತ್ತೀಚಿನ ದಿನಗಳಲ್ಲಿ, ಸೋಮಣ್ಣ ಹಾಗೂ ಜಿಲ್ಲಾ ನಾಯಕರ ನಡುವಿನ ಅಂತರ ಹೆಚ್ಚಾಗಿದೆ. ಈ ಎರಡೂ ಗುಂಪುಗಳಿಂದ, ಪಕ್ಷ ಕಟ್ಟಿ ಬೆಳೆಸಿದವರು, ಆರ್‌ಎಸ್‌ಎಸ್‌ ಮುಖಂಡರು, ನಿರ್ಲಿಪ್ತ ಸ್ಥಿತಿ ಕಾಯ್ದುಕೊಂಡಿದ್ದಾರೆ.

ವಿ. ಸೋಮಣ್ಣ ವಿರುದ್ಧ, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್‌.ಎಸ್‌. ರವಿಶಂಕರ್‌ ಪತ್ರ ಬರೆದಿದ್ರು. ರಹಸ್ಯವಾಗಿ ಬರೆದಿದ್ದ ಪತ್ರ, ಸೋಮಣ್ಣ ಕೈಸೇರಿದ ಬಳಿಕ, ಮುನಿಸು ಮತ್ತಷ್ಟು ಹೆಚ್ಚಾಗಿದೆಯಂತೆ. ಒಟ್ನಲ್ಲಿ ಬಣ ರಾಜಕೀಯ ಶಮನ ಮಾಡದಿದ್ರೆ, ತುಮಕೂರು ಜಿಲ್ಲಾ ಬಿಜೆಪಿ ಪಾಳಯ ಇಬ್ಭಾಗ ಖಚಿತ ಅಂತಾ ಕಾರ್ಯಕರ್ತರು ಹೇಳ್ತಿದ್ದಾರೆ.

About The Author