ಬೆಂಗಳೂರು: ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ವಿಧಾನಸಭೆ ಸಭಾಪತಿ ಕೆ.ಆರ್ ರಮೇಶ್ ಕುಮಾರ್ ಸದನದಲ್ಲೇ ರಾಜೀನಾಮೆ ಘೋಷಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ನೂತನ ಸಿಎಂ ವಿಶ್ವಾಸಮತ, ಧನ ವಿನಿಯೋಗ ವಿಧೇಯಕ ಮಂಡನೆ ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ನನ್ನ ಶಕ್ತಿ ಮೀರಿ ಸಂವಿಧಾನ ಬದ್ಧವಾಗಿ ಕೆಲಸ ಮಾಡಿರುವೆ. ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿಯವರು ನನ್ನ ಬಳಿ ಸಭಾಧ್ಯಕ್ಷ ಸ್ಥಾನದ ಕುರಿತು ಪ್ರಸ್ತಾಪಿಸಿದ್ರು. ಬಿಜೆಪಿ ಕೂಡ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿತ್ತು. ಕಳೆದ 14 ತಿಂಗಳು ನಾಲ್ಕು ದಿನಗಳ ಕಾಲ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯಾವದ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯದ ಏಳಿಗೆಗಾಗಿ ಶ್ರಮಿಸಬೇಕು, ಬಡವರಿಗೆ, ದನಿಯಿಲ್ಲದವರಿಗೆ ದನಿಯಾಗಬೇಕು ಅಂತ ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ್ರು.
ಬಳಿಕ ಮಾತನಾಡಿದ ರಮೇಶ್ ಕುಮಾರ್, ಅತೃಪ್ತರನ್ನು ಅನರ್ಹಗೊಳಿಸಿ ಇತಿಹಾಸ ಸೃಷ್ಟಿಸಿದ್ದೇನೆ ಎಂಬ ಭ್ರಮೆಯಲ್ಲಿ ನಾನಿಲ್ಲ. ನಾನು ಈ ಜವಾಬ್ದಾರಿಯಿಂದ ಬಿಡುಗಡೆ ಹೊಂದಬೇಕು ಅಂತ ನಿಶ್ಟಯಿಸಿರುವೆ. ನಾನು ವಿದ್ಯಾರ್ಥಿ ಜೀವನದಲ್ಲೇ ಹೋರಾಟಗಾರನಾಗಿದ್ದೇ. ದೇವರಾಜು ಅರಸುರವರ ಸ್ಫೂರ್ತಿಯಿಂದ ನಾನು ಈ ಮಟ್ಟಕ್ಕೆ ಬೆಳೆದಿರುವೆ. ನನ್ನ ಬದುಕು ಒಂದು ಹಂತಕ್ಕೆ ಬಂದು ತಲುಪಿದೆ ಅಂತ ವಿದಾಯ ಭಾಷಣ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಉಪಸಭಾಧ್ಯಕ್ಷರು ಕಾರ್ಯ ಕಲಾಪಗಳನ್ನು ನಡೆಸಿಕೊಡ್ತಾರೆ ಅಂತ ಹೇಳಿ ತಮ್ಮ ಖುರ್ಚಿಯಿಂದ ನಿರ್ಗಮಿಸಿಯೇ ಬಿಟ್ಟರು.