ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಂದನೆಗೆ ಸಂಬಂಧಿಸಿದಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಕಳೆದ 2024ರ ಜನವರಿ 18ರಂದು ರಾಯಚೂರಿನ ಸಿರಿವಾರದಲ್ಲಿ ನಮೋ ಬ್ರಿಗೇಡ್ ವತಿಯಿಂದ ಕಾರ್ಯಕ್ರಮ ನಡೆದಿತ್ತು. ಆಗ ಭಾಷಣದ ವೇಳೆ ಸೂಲಿಬೆಲೆ ಖರ್ಗೆ ಅವರನ್ನು ಅಯೋಗ್ಯ ಎಂದು ಟೀಕಿಸಿದ್ದರು.
ಕಲಬುರಗಿಯಲ್ಲಿ ಇಎಸ್ಐ ಆಸ್ಪತ್ರೆ ತೆರೆದಿರುವುದನ್ನೇ ತಮ್ಮ ಸಾಧನೆ ಎಂದು ಖರ್ಗೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಜನರ ತೆರಿಗೆ ದುಡ್ಡಿನಲ್ಲಿ ಕಟ್ಟಲಾಗಿರುವ ಆಸ್ಪತ್ರೆಯನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವಂತಹ “ಅಯೋಗ್ಯ” ಅವರು ಎಂದು ಸೂಲೆಬೆಲೆ ಹೇಳಿಕೆ ನೀಡಿದ್ದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : ಮಹಿಳೆಯ ತುಟಿ ಕಚ್ಚಿ ಎಸ್ಕೇಪ್ ಆಗಿದ್ದ ಕಾಮುಕ ಅರೆಸ್ಟ್!
ಅಲ್ಲದೆ ಹೈಕೋರ್ಟ್ ಕಳೆದ ಅಕ್ಟೋಬರ್ 2024ರಲ್ಲಿ ಎಸ್‌ಸಿ/ ಎಸ್‌ಟಿ ಕಾಯ್ದೆಯಡಿಯ ಆರೋಪಗಳನ್ನು ತಿರಸ್ಕರಿಸಿತ್ತು. ಆದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಡಿಯ ಮೊಕದ್ದಮೆಗಳನ್ನು ಹಾಗೆಯೇ ಉಳಿಸಿಕೊಂಡಿತ್ತು. ಅಲ್ಲದೆ ಇವುಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸುವಂತೆ ಅವಕಾಶ ನೀಡಿತ್ತು.
ಈ ಕಾರಣಕ್ಕಾಗಿಯೇ ಸೂಲಿಬೆಲೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ತಾನು “ಅಯೋಗ್ಯ” ಎಂದು ಕರೆದ ಪದವನ್ನು ಇಂಗ್ಲಿಷ್‌ನ ಅನುವಾದ ರ‍್ಯಾಸ್ಕಲ್ ಅಥವಾ ನೀಚ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. “ಅಯೋಗ್ಯ” ಎಂಬ ಪದ ಹಲವು ಸಮಾನಾರ್ಥಕ ಅರ್ಥ ಹೊಂದಿದೆ. ಅದಕ್ಕೆ ಸಮೀಪದಲ್ಲಿ ಬರುವ ಪದ ನಿಷ್ಪ್ರಯೋಜಕ ಎಂದು ಎಂಬುದಾಗಿ ಹೈಕೋರ್ಟ್‌ನಲ್ಲಿ ಸೂಲಿಬೆಲೆ ತಮ್ಮ ವಕೀಲರ ಮೂಲಕ ವಾದಿಸಿದ್ದರು.
ಇನ್ನೂ ಈ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಕೂಡ ಸೂಲಿಬೆಲೆ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿತು. ಸೂಲಿಬೆಲೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಧಾಂಶು ಪ್ರಕಾಶ್ ಮತ್ತು ಸುಯೋಗ್ ಹೆರಳೆ ಅವರ ಮೂಲಕ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಿರಾಳತೆ ಸಿಕ್ಕಂತಾಗಿದೆ.