ಶ್ರೀಲಂಕಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯು ಉಂಟಾಗಿದೆ. ಭೂಕುಸಿತಗಳೂ ಸಂಭವಿಸಿದ್ದು, ಇದುವರೆಗೆ ಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ನಿರಂತರ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತಗೊಂಡಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶ್ರೀಲಂಕಾ ಸರ್ಕಾರವು ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ. ಮಳೆಯ ವಾತಾವರಣ ಮುಂದುವರಿದರೆ ರಜೆ ಮುಂದುವರಿಸುವ ಸಾಧ್ಯತೆಯೂ ಇದೆ ಎಂದು ಅಧಿಕೃತ ವಲಯ ತಿಳಿಸಿದೆ.
ರಾಜಧಾನಿ ಕೊಲಂಬೊದಿಂದ ಸುಮಾರು 300 ಕಿಲೋಮೀಟರ್ ಪೂರ್ವದಲ್ಲಿರುವ ಬದುಲ್ಲಾ ಮತ್ತು ನುವಾರ ಎಲಿಯಾ ಪ್ರದೇಶಗಳಲ್ಲಿ ಭೂಕುಸಿತದಿಂದ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 21 ಮಂದಿ ಕಾಣೆಯಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಇತ್ತ, ರಕ್ಷಣಾ ತಂಡಗಳು ಬಾಧಿತ ಪ್ರದೇಶಗಳಲ್ಲಿ ಹುಡುಕಾಟ ಮತ್ತು ರಕ್ಷಣೆ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಪರಿಸ್ಥಿತಿ ಇನ್ನಷ್ಟು ಗಂಭೀರವಾಗದಂತೆ ತುರ್ತು ಕ್ರಮಗಳು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

