ಜೈಪುರ್: ರಾಜ್ಯದಲ್ಲಿ ನಡೆದ ಹಿಂದೂ ವ್ಯಕ್ತಿಯೊಬ್ಬರ ಹತ್ಯೆ ಹಿನ್ನೆಲೆಯಲ್ಲಿ ಅಸ್ಥಿರ ಪರಿಸ್ಥಿತಿಯನ್ನು ಚರ್ಚಿಸಲು ರಾಜಸ್ಥಾನದ ಜುಂಜುನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮೂರು ದಿನಗಳ ಪ್ರಮುಖ ಸಭೆಯನ್ನು ಆಯೋಜಿಸಿದೆ.
ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ನಂತರ ಆರ್‍ಎಸ್‍ಎಸ್ ತನ್ನ ಗಮನವನ್ನು ಬದಲಾಯಿಸಿದೆ. ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಆರ್‍ಎಸ್‍ಎಸ್ ಸಭೆಯಲ್ಲಿ ಸಂಘಟನೆಯ ಪ್ರಾಂತ ಪ್ರಚಾರಕರು ಪ್ರಸ್ತುತ ಭುಗಿಲೆದ್ದಿರುವ ಪರಿಸ್ಥಿತಿಯ ಕುರಿತು ಚರ್ಚಿಸಲಿದ್ದಾರೆ.
ಆರ್‍ಎಸ್‍ಎಸ್ ಸಂಘದ ಸಂಚಾಲಕ ಮೋಹನ್ ಭಾಗವತ್, ಸರ್ಕಾರಿ ದತ್ತಾತ್ರೇಯ ಹೊಸಬಾಳೆ ಮತ್ತು ಆರ್‍ಎಸ್‍ಎಸ್‍ನ ಎಲ್ಲಾ 45 ವಲಯಗಳ ಪ್ರಚಾರಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಮತ್ತು ಶಿವಪ್ರಕಾಶ್ ಮತ್ತು ವಿಎಚ್ಪಿ ನಾಯಕರು ಭಾಗವಹಿಸಲಿದ್ದಾರೆ.
ಮುಂದಿನ ವರ್ಷ ರಾಜಸ್ಥಾನ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ, ಇದು ಪ್ರತಿ ವರ್ಷ ನಡೆಯುವ ವಾಡಿಕೆ ಸಭೆ ಎಂದು ಆರ್‍ಎಸ್‍ಎಸ್ ಮುಖಂಡರು ಹೇಳಿದ್ದಾರೆ.
ಏನಿದು ಘಟನೆ?
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಜೂನ್ 28ರಂದು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆ ಆರಂಭವಾಗಿವೆ.
ಆರೋಪಿ ರಿಯಾಜ್, ಕನ್ನಯ್ಯಲಾಲ್ ಅವರ ಕತ್ತನ್ನು ಕತ್ತರಿಸಿದ್ದು, ಮತ್ತೊಬ್ಬ ಆರೋಪಿ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಈ ಭೀಕರ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಉದಯಪುರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.