ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳ ಜೊತೆಗೂ ಮೀಟಿಂಗ್ ಮಾಡಿದ್ದಾರಂತೆ. ಹಲವು ಇಲಾಖೆಗಳ ಕಾರ್ಯದರ್ಶಿ, ಅಧಿಕಾರಿಗಳ ಜೊತೆ ಸಭೆ ಮಾಡಿ, ಹಲವು ಮಾಹಿತಿಗಳನ್ನು ಪಡೆದಿದ್ದಾರಂತೆ.
ಸಹಕಾರ ಇಲಾಖೆ ಅಧಿಕಾರಿಗಳಿಗೂ ಫೋನ್ ಬಂದಿದೆ. ಈ ವಿಚಾರ ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಗೊತ್ತಾಗಿದೆ. ತಕ್ಷಣವೇ ಅಧಿಕಾರಿಗಳಿಗೆ ಫೋನ್ ಮಾಡಿ, ಸಭೆಗೆ ಹೋಗದಂತೆ ಸೂಚಿಸಿದ್ದಾರೆ. ಸುರ್ಜೇವಾಲ ಮೀಟಿಂಗ್‌ನಲ್ಲಿ ಭಾಗಿಯಾದ್ರೆ ಶಿಸ್ತುಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸಚಿವ ಕೆ.ಎನ್.ರಾಜಣ್ಣ ಅವರು ಪಕ್ಷದಲ್ಲಿ ಯಾರನ್ನೂ ಬೇಕಾದ್ರೂ ಕರೀಬಹುದು. ಆದರೆ ಸರ್ಕಾರಿ ಅಧಿಕಾರಿಗಳನ್ನು ಕರೆದು ಸಭೆ ಮಾಡ್ತಾರೆ ಅಂದ್ರೆ, ಸಂವಿಧಾನಕ್ಕೆ ವಿರೋಧವಾದುದ್ದು ಅಂತಾ ಹೇಳಿದ್ರು. ರಾಜಣ್ಣ ಮಾತುಗಳನ್ನು ಕೇಳಿದ್ರೆ, ಸುರ್ಜೇವಾಲ ಮೀಟಿಂಗ್ ನಿಜ ಅನ್ನೋದನ್ನ ಪರೋಕ್ಷವಾಗಿ ಹೇಳಿದಂತಿದೆ.
ಶಾಸಕರು, ಸಚಿವರ ಜೊತೆಗೆ ಸುರ್ಜೇವಾಲಾ ಸಭೆ ಬಗ್ಗೆಯೂ, ಕಾಂಗ್ರೆಸ್ಸಿಗರಿಂದಲೇ ವಿರೋಧ ವ್ಯಕ್ತವಾಗಿತ್ತು. ಕಾನೂನು ಮೀರಿ ಹಸ್ತಕ್ಷೇಪ ಮಾಡ್ತಿದ್ದಾರೆ ಅಂತಾ ಆರೋಪಿಸಲಾಗಿತ್ತು. ಹರಿಯಾಣದವರಾದ ಸುರ್ಜೇವಾಲಾ, ತಮ್ಮ ರಾಜ್ಯದ ಕೇಡರ್ ಅಧಿಕಾರಿಗಳನ್ನೂ ಬಳಕೆ ಮಾಡಿಕೊಳ್ತಿದ್ದಾರಂತೆ. ಕರ್ನಾಟಕ ಉಸ್ತುವಾರಿ ಆಗಿರೋದ್ರಿಂದ, ರಾಜ್ಯದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸೋಕೆ ಪ್ರಯತ್ನಿಸುತ್ತಿದ್ದಾರಂತೆ.
ಇದರಿಂದ ಕೆರಳಿ ಕೆಂಡವಾಗಿರುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಸುರ್ಜೇವಾಲ ಬದಲಾವಣೆ ಮಾಡಬೇಕೆಂಬ ಕೂಗು, ರಾಜ್ಯ ಕಾಂಗ್ರೆಸ್ಸಲ್ಲಿ ಹೆಚ್ಚಾಗಿದೆ. ಈ ವಿಚಾರವಾಗಿ ಶೀಘ್ರವೇ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಅಧಿಕಾರಿಗಳ ಜೊತೆ ಸುರ್ಜೇವಾಲಾ ಸಭೆಯ ಮಾಹಿತಿ ಸಿಕ್ತಿದ್ದಂತೆ, ವಿಪಕ್ಷಗಳಿಗೆ ಕಾಂಗ್ರೆಸ್ ವಿರುದ್ಧ ಹೊಸ ಅಸ್ತ್ರ ಸಿಕ್ಕಂತಾಗಿದೆ. ಜೆಡಿಎಸ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ
ಜೆಡಿಎಸ್ ಟ್ವೀಟ್ ಟಾಂಗ್
ಇಷ್ಟು ದಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ರಣದೀಪ್ ಸುರ್ಜೇವಾಲಾ, ಈಗ ಸೂಪರ್ ಸಿಎಂ ರೀತಿ, ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸುರ್ಜೇವಾಲಾಗೆ ಆ ಅಧಿಕಾರ ಕೊಟ್ಟವರು ಯಾರು ? ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸುವುದು ಸಂವಿಧಾನ ವಿರೋಧಿ ಕೃತ್ಯ!
ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಅಧಿಕಾರಕ್ಕಾಗಿ ಅಂತರ್ಯುದ್ಧ ನಡೆಯುತ್ತಿದೆ. ಹೀಗಾಗಿ ಹೈಕಮಾಂಡ್ ಸದ್ದಿಲ್ಲದೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾರನ್ನೇ ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಶಂಕೆಯೂ ವ್ಯಕ್ತವಾಗುತ್ತಿದೆ.
ಹೈಕಮಾಂಡ್ ಗುಲಾಮಗಿರಿಯಲ್ಲಿ ತೊಡಗಿರುವ ಡಮ್ಮಿ ಸಿಎಂ ಸಿದ್ದರಾಮಯ್ಯ, ಡಮ್ಮಿ ಡಿಸಿಎಂ ಡಿ.ಕೆ. ಶಿವಕುಮಾರ್. ಕರ್ನಾಟಕದ ಸ್ವಾಭಿಮಾನವನ್ನು ಅಡವಿಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿರುವ ಜನಾದೇಶಕ್ಕೆ ಅಪಮಾನ, ವಿದ್ರೋಹ ಎಸಗುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದೆ.
ಸುರ್ಜೇವಾಲಾ ಸೂಪರ್ ಸಿಎಂ ನಡೆ, ಸ್ವಯಂ ಪ್ರೇರಿತಾನೋ? ಅಥವಾ ಸೂಚನೆ ಮೇರೆಗೆ ಹೀಗೆಲ್ಲಾ ಮಾಡ್ತಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಕ್ರಮದ ಮೇಲೆ ಎಲ್ಲವೂ ಸ್ಪಷ್ಟವಾಗಲಿದೆ.