ಕೃಷಿ ಇಲಾಖೆಯಿಂದಲೇ ರಾಜ್ಯ ರೈತರಿಗೆ ವಂಚನೆ – ಅವಧಿ ಮೀರಿದ ಗೊಬ್ಬರ, ನಕಲಿ ಬಿಲ್!

ಕಲಬುರಗಿಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಕೆಲವು ರೈತ ಸಂಪರ್ಕ ಕೇಂದ್ರಗಳಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಅವಧಿ ಮೀರಿದ ಕೀಟನಾಶಕ ಹಾಗೂ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಶಾಕಿಂಗ್‌ ಮಾಹಿತಿ ಹೊರ ಬಂದಿದೆ. ಈ ಕುರಿತಾಗಿ ಹಸಿರು ಸೇನೆ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿವಿಧೆಡೆ ಉತ್ತಮ ಮಳೆಯ ಕಾರಣದಿಂದಾಗಿ ರೈತರು ಬಿತ್ತನೆ ಕಾರ್ಯ ಜೋರುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಅಗತ್ಯವಿರುವ ಗೊಬ್ಬರ ಮತ್ತು ಕೀಟನಾಶಕಗಳನ್ನು ಸರಬರಾಜು ಮಾಡುವಲ್ಲಿ ಕೃಷಿ ಇಲಾಖೆ ರೈತರಿಗೆ ಅನ್ಯಾಯ ಮಾಡಿದೆ. ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಗೊಬ್ಬರ ಅಂಗಡಿಗಳಿಂದಲೇ ವಂಚನೆ ನಡೆಯುತ್ತಿರುವ ಕುರಿತ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಎಲ್ಲ ಬೆಳವಣಿಗೆಗಳು ಖುದ್ದು ಕೃಷಿ ಸಚಿವ ಪ್ರಿಯಾಂಕ್ ಖರ್ಗೆಯ ತವರು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸಚಿವರು ಇದನ್ನು ಗಮನಿಸದಿರುವುದು ರೈತ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ. ಇದೇ ವೇಳೆ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಫರ್ಟಿಲೈಸರ್ ಅಂಗಡಿಯಲ್ಲಿ ರೈತರಿಗೆ MRP ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಗೊಬ್ಬರ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ರೈತರು ಬಿಲ್ ಕೇಳಿದಾಗ ನಕಲಿ ಬಿಲ್ ನೀಡಲಾಗುತ್ತಿದೆ ಎಂಬುದೂ ದೃಢವಾಗಿದೆ. ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಗಮನ ಸೆಳೆದಿದ್ದಾರೆ. ಬಳಿಕ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿಯ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

ರೈತ ಸಂಘಟನೆಗಳ ಬೆಂಬಲದೊಂದಿಗೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ವಂಚನೆ ನಡೆಸಿದ ಎಜೆನ್ಸಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವಧಿ ಮೀರಿದ ಉತ್ಪನ್ನ ಮಾರಾಟ ಮಾಡಿದ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಬೇಕು. ರೈತರಿಗೆ ಆದ ಹಾನಿಗೆ ಪರಿಹಾರ ನೀಡಬೇಕು.

ವರದಿ : ಲಾವಣ್ಯ ಅನಿಗೋಳ

About The Author