ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧ- ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಬೆಂಗಳೂರು: ಸರ್ಕಾರಿ ಶಾಲೆಗಳ ಆಸ್ತಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಮಂಗಳವಾರ (ಏ.5) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ (ಉತ್ತರ ಮತ್ತು ದಕ್ಷಿಣ) 161 ಸರ್ಕಾರಿ ಶಾಲೆಗಳ ಆಸ್ತಿ ದಾಖಲಾತಿಗಳನ್ನು ಕಂದಾಯ ಸಚಿವರಾದ ಆರ್. ಅಶೋಕ್ ಅವರೊಂದಿಗೆ ಆಯಾ ಶಾಲೆಗಳ ಎಸ್‌.ಡಿ‌.ಎಂ.ಸಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಸಚಿವ ನಾಗೇಶ್ ಅವರು, ‘ಸರ್ಕಾರಿ ಶಾಲೆಗಳ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲ ಎನ್ನುವ ಆತಂಕವನ್ನು ಶಿಕ್ಷಣ ಇಲಾಖೆ ಮಾತ್ರವಲ್ಲದೇ ಸಾರ್ವಜನಿಕರು ಕೂಡ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬೆಂಗಳೂರು ಜಿಲ್ಲೆಯಲ್ಲಿ ದಾಖಲೆಗಳು ಇಲ್ಲ ಎನ್ನುವ ವಿಚಾರ ಮತ್ತಷ್ಟು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆಸ್ತಿಗಳನ್ನು ಕದಿಯಲು ಸಮಾಜಘಾತುಕ ಶಕ್ತಿಗಳು, ವಂಚಕರು ಕಾಯುತ್ತಿರುತ್ತಾರೆ. ಹಣ, ಅಧಿಕಾರ ಮತ್ತು ಬಲ ಪ್ರಯೋಗದ ಮೂಲಕ ಆಸ್ತಿ ಕಬಳಿಸುವ ಯತ್ನ ನಡೆಸಲಾಗುತ್ತದೆ. ಅಂತಹುದರಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿಯವರ ಪ್ರಯತ್ನದ ಫಲವಾಗಿ ನೂರಾರು ಸರ್ಕಾರಿ ಶಾಲೆಗಳ ಆಸ್ತಿಯನ್ನು ದಾಖಲಾತಿ ಮಾಡಿಸಲು ಸಾಧ್ಯವಾಗಿದೆ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ, ಸಮಾಜ ಸೇವೆಯ ಮನೋಭಾವದವರು, ನಾಗರಿಕ ಹೋರಾಟಗಾರರ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆ ಸಾಧ್ಯವಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಮಾಡಿರುವಂತೆ ರಾಜ್ಯದ ಬೇರೆ ಭಾಗಗಳಲ್ಲಿರುವ ಶಾಲೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗಳ ಸಂರಕ್ಷಣೆಗಾಗಿ ದಾಖಲಾತಿ ಮಾಡಿಸಬೇಕಿದೆ. ಮುಂದಿನ ದಿನಗಳಲ್ಲಿ ದಾಖಲಾತಿ ಆಗಿರುವ ಆಸ್ತಿಗಳ ಸರ್ವೇ ಮಾಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಜೊತೆ ಕಾರ್ಯ ನಿರ್ವಹಿಸುತ್ತೇವೆ. ಶಾಲಾ ಆಸ್ತಿಗಳಿಗೆ ತಂತಿಬೇಲಿ ಅಳವಡಿಸಿ ಹದ್ದುಬಸ್ತು ಮಾಡಲಾಗುತ್ತದೆ. ಖಾಸಗಿ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಶಾಲೆಗಳ ಆಸ್ತಿ ಒತ್ತುವರಿಯಾಗದಂತೆ ತಡೆಯಲು ತಂತಿಬೇಲಿ ಹಾಕಿಸಬೇಕು ಎಂದು ಎಸ್ ಡಿಎಂಸಿ ಪದಾಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

‘ನೋಂದಣಿ, ಸ್ಟ್ಯಾಂಪ್, ದಾಖಲೆಗಳು ಇಲ್ಲದ ಕಾಲದಲ್ಲೂ ಆಸ್ತಿಗಳನ್ನು ಪರಭಾರೆ ಮಾಡಲಾಗುತ್ತಿತ್ತು. ಇಬ್ಬರು ವ್ಯಕ್ತಿಗಳ ನಡುವೆ ಆಸ್ತಿ ಪರಭಾರೆ ಮಾಡುವಾಗ ಅಲ್ಲಿರುವ ಮರ, ನದಿ, ಸೂರ್ಯನ ಮೇಲೆ ಪ್ರಮಾಣ, ಸಾಕ್ಷಿಯಾಗಿ ಪರಭಾರೆ ಮಾಡುತ್ತಿದ್ದರು. ಆದರೆ, ಇಂದು ಸೂಕ್ತ ದಾಖಲೆಗಳು, ಕಟ್ಟಡಗಳು ಇರುವ ಆಸ್ತಿಗಳನ್ನು ಕೂಡ ಕಬಳಿಸಲಾಗುತ್ತಿದೆ. ದುರಾಸೆ ಹೆಚ್ಚಾಗಿದೆ’ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

‘ಭಾರತವು ಹಲವು ವರ್ಷಗಳಿಂದ ದಾನ, ಧರ್ಮಗಳ ಸಾಮಾಜಿಕ ವ್ಯವಸ್ಥೆಯನ್ನು ಪಾಲಿಸುತ್ತಿತ್ತು. ಬ್ರಿಟೀಷರ ಆಳ್ವಿಕೆ ಮತ್ತು ನಂತರದಲ್ಲಿ ಆರ್ಥಿಕತೆ ಕೇಂದ್ರಿತ ವ್ಯವಸ್ಥೆಯಾಗಿ ಬದಲಾಗುತ್ತಿದ್ದಂತೆ ಹಲವು ಸಮಸ್ಯೆಗಳು ಸೃಷ್ಟಿಯಾದವು. ನಮ್ಮ ಪೂರ್ವಜರು ವಿದ್ಯಾ ದಾನ, ತಮ್ಮಲ್ಲಿರುವ ವಸ್ತುಗಳ ದಾನ, ಆಸ್ತಿ ದಾನ ಮುಂತಾದವುಗಳನ್ನು ಮಾಡುತ್ತಿದ್ದರು. ವಿದ್ಯೆ, ಆಹಾರ ಮತ್ತು ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು ಮಾರಾಟ ಮಾಡಬಾರದು ಎಂದು ಭಾರತೀಯರು ನಂಬಿ, ಅದನ್ನು ಪಾಲಿಸುತ್ತಿದ್ದರು. ಇಂದಿಗೂ ಕೆಲವು ಆಯುರ್ವೇದ ವೈದ್ಯರು ಹಣ ಪಡೆಯದೆ ಚಿಕಿತ್ಸೆ ನೀಡುತ್ತಾರೆ. ಅಂತಹ ವೈದ್ಯರಿಗೆ ಹಣ ನೀಡಬೇಕು ಎಂದು ಚಿಕಿತ್ಸೆ ಪಡೆದವರಿಗೆ ಅನಿಸಿದರೆ ಆಸ್ಪತ್ರೆಯ ಟ್ರಸ್ಟ್¬ಗೆ ನೀಡಲು ಹುಂಡಿಯಲ್ಲಿ ಇರಿಸಲಾಗುತ್ತದೆ’ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ ಸೇರಿದಂತೆ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author