ಜಾತಿಗಣತಿಗೆ ಹೈಕೋರ್ಟ್ ಟೆನ್ಷನ್ ಶುರುವಾಗಿದ್ದು, ತಡೆ ಕೋರಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿದೆ. ರಾಜ್ಯಾದ್ಯಂತ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಯನ್ನು, ಮುಂದೂಡಲು ಸಾಧ್ಯವೇ ಅಂತಾ ಹಿಂದಿನ ವಿಚಾರಣೆಯಲ್ಲಿ, ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತ್ತು. ಜೊತೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿ ಬಗ್ಗೆ, ಸೆಪ್ಟೆಂಬರ್ 23ರಂದು ಮಂಗಳವಾರ ವಿಚಾರಣೆ ನಡೆಸೋದಾಗಿ ಹೇಳಿತ್ತು.
ರಾಜ್ಯ ಒಕ್ಕಲಿಗರ ಸಂಘ, ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಮತ್ತು ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಸೇರಿದಂತೆ ಹಲವರು ಪಿಐಎಲ್ ಸಲ್ಲಿಸಿದ್ದರು. ಕಳೆದ ಬುಧವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ವಿಬು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿಚಾರಣೆ ಮುಂದೂಡಿತ್ತು. ಇಂದು ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.
ಇನ್ನು, ರಾಜ್ಯ ಸರ್ಕಾರಕ್ಕೆ ಜಾತಿಗಣತಿ ನಡೆಸುವ ಅಧಿಕಾರ ಇಲ್ಲ. ಜನರ ಸ್ಥಿತಿಗತಿ ಪರಿಶೀಲನೆ, ಹಿಂದುಳಿದ ವರ್ಗಗಳ ಆಯೋಗದ ಕೆಲಸವಲ್ಲ. ಸರ್ಕಾರ ಜಾತಿಗಣತಿ ಹೆಸರಲ್ಲಿ ಹೊಸ ಜಾತಿಗಳನ್ನು ಸೃಷ್ಟಿ ಮಾಡ್ತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ. ಈ ಹಿಂದಿನ ವರದಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜಾತಿಗಣತಿಯ ಅಂಕಿ ಅಂಶಗಳನ್ನು, ಜಿಯೋ ಟ್ಯಾಗಿಂಗ್ ಮೂಲಕ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗ್ತಿದೆ. ಇದು ಆಧಾರ್ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಅಂತಾ ಆರೋಪಿಸಲಾಗಿತ್ತು.