ರಾಜಕೀಯ ಗುರು ಶಿಷ್ಯರಾದ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಬೀಗತನಕ್ಕೆ ಮುಂದಾಗಿದ್ದು, ಡಿಕೆ ಪುತ್ರಿ ಐಶ್ವರ್ಯ ಮತ್ತು ಎಸ್ ಎಂ ಕೃಷ್ಣ ಮೊಮ್ಮಗ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮಗ ಅಮಾರ್ತ್ಯ ಮದುವೆ ನಿಶ್ಚಯ ಶಾಸ್ತ್ರ ನಡೆದಿದೆ. ಇದೇ ವರ್ಷ ಇವರಿಬ್ಬರ ಮದುವೆ ಕೂಡ ನಡೆಯಲಿದೆ.

ಇನ್ನು ಈ ಗುರು ಶಿಷ್ಯರ ಸಂಬಂಧ ಬೀಗತನವಾಗಿ ಮಾರ್ಪಾಡಾಗಿದ್ದರ ಬಗ್ಗೆ ಹೇಳೋದಾದ್ರೆ, ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಬೇಕೆಂದು ಕನಸು ಕಂಡಿದ್ದ ಡಿಕೆಶಿಯನ್ನ ಪಾಲಿಟಿಕಲ್‌ಗೆ ಕರೆತಂದಿದ್ದು, ಮಾಜಿ ಸಿಎಂ ಎಸ್.ಎಂ.ಕೃಷ್ಣ. ಸಿಎಂ ಸ್ಥಾನಕ್ಕೆ ಆಯ್ಕೆ ಆಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಮತ ಪ್ರಚಾರ ನಡೆಸುವ ವೇಳೆ, ರಾಜ್ಯಾದ್ಯಂತ ಕಾಂಗ್ರೆಸ್ ಸಂಘಟನೆಗೆ ಸಾಥ್ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್.

ಅಲ್ಲದೇ, 2002ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಸಲು ಡಿಕೆಶಿ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರನ್ನ ಬೆಂಗಳೂರಿಗೆ ಕರೆತರಿಸಿ ಇರಿಸಿದ್ದರು.

ಈ ಮೂಲಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯಲು ಸಹಾಯ ಮಾಡಿದ್ದರು. ಈ ವೇಳೆ ಡಿಕೆಶಿ ಮತ್ತು ಎಸ್.ಎಂ.ಕೃಷ್ಣರ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತ್ತು. ಅಲ್ಲದೇ, ಕಾಂಗ್ರೆಸ್ ಹೈಕಮಾಂಡ್‌ನಲ್ಲೂ ಡಿಕೆಶಿ ನಂಬಿಕಸ್ಥ ನಾಯಕರೆನ್ನಿಸಿಕೊಂಡಿದ್ದರು.

ಎಸ್.ಎಂ.ಕೃಷ್ಣರ ಅಳಿಯ ಸಿದ್ಧಾರ್ಥ್ ಜೊತೆ ಡಿಕೆಶಿ ಬ್ಯುಸಿನೆಸ್ ಪಾರ್ಟ್‌ನರ್ ಆಗಿದ್ದರು. ಕೆಫೆ ಕಾಫೀ ಡೇಯಲ್ಲಿ ಶೇರ್ ಸಹ ಹೊಂದಿದ್ದರು. ಇಲ್ಲಿಗೆ ಗುರು ಶಿಷ್ಯ ಮತ್ತು ಗೆಳೆತನದ ಸಂಬಂಧ ಗಟ್ಟಿಗೊಂಡಿತ್ತು. ಇದೀಗ ಈ ಸಂಬಂಧ ಬೀಗತನವಾಗಿ ಮಾರ್ಪಾಡಾಗಿದೆ.

ಸಿದ್ಧಾರ್ಥ್ ಸಾವಿನ ನಂತರ ಮಗ ಅಮಾರ್ತ್ಯ, ತಾಯಿ ಮತ್ತು ಸಹೋದರನೊಂದಿಗೆ ಕೆಫೆ ಕಾಫೀ ಡೇಯನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತ ಡಿಕೆ ಪುತ್ರಿ ಐಶ್ವರ್ಯ ತಂದೆಯ ವ್ಯವಹಾರವನ್ನ ಹ್ಯಾಂಡಲ್ ಮಾಡುತ್ತಿದ್ದಾಳೆ. ಇಬ್ಬರೂ ಬ್ಯುಸಿನೆಸ್‌ನಲ್ಲಿ ನಿಪುಣರಾಗಿರುವುದರಿಂದ ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆಂಬುದು ಡಿಕೆಶಿ ಮತ್ತು ಎಸ್.ಎಂ. ಕೃಷ್ಣ ಮನೆಜನರ ನಂಬಿಕೆ. ಹೀಗಾಗಿ ಇವರಿಬ್ಬರ ವಿವಾಹ ಇದೇ ವರ್ಷ ಮಾಡಬೇಕೆಂದು ಗುರು ಹಿರಿಯರು ನಿರ್ಧರಿಸಿದ್ದಾರೆ.

