Wednesday, September 17, 2025

Latest Posts

ದುಡ್ಡು ಕೇಳಿದ್ರೆ ಜೈಲು ಫಿಕ್ಸ್ ವೈದ್ಯರ ಮೇಲೆ ಕಠಿಣ ಕ್ರಮ….

- Advertisement -

ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೊಡ್ಡ ನಿರ್ಧಾರ ಹೊರಡಿಸಿದೆ. ಈಗ ಯಾರಿಗಾದರೂ ರಸ್ತೆ ಅಪಘಾತವಾಗಲಿ, ಕೈಕಾಲು ಮುರಿದು ತೀವ್ರ ಗಾಯಗಳಾಗಲಿ, ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಅಥವಾ ಆಸ್ಪತ್ರೆ ಮೊದಲು ಹಣ ಕಟ್ಟಬೇಕು ಎಂದು ಒತ್ತಾಯ ಮಾಡಿದರೆ ನೇರವಾಗಿ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಕುರಿತು ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ವೈದ್ಯ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಆಗ ಮಂತ್ರಿಗಳು ಅಪಘಾತದ ಪ್ರಕರಣಗಳಲ್ಲಿ ಜೀವ ಉಳಿಸುವುದು ಮೊದಲ ಆದ್ಯತೆ ಆಗಬೇಕು. ಹಣ ಬೇಡುವುದರಿಂದ ಅನೇಕ ಬಾರಿ ಚಿಕಿತ್ಸೆ ತಡವಾಗಿ ಗಾಯಾಳು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಅದರಂತೆ ಇಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಅಪಘಾತದಲ್ಲಿ ಗಾಯಗೊಂಡ ಯಾರೇ ಆಗಿರಲಿ ಅವರನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಕ್ಷಣವೇ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಹಣ ಇಲ್ಲದೇ ಇದ್ದರೂ ಅಥವಾ ಸಂಬಂಧಿಕರು ಆಗಮಿಸದಿದ್ದರೂ, ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡುವುದರಲ್ಲಿ ವಿಳಂಬ ಮಾಡಬಾರದು. ಒಂದು ವೇಳೆ ಆಸ್ಪತ್ರೆ ಅಥವಾ ವೈದ್ಯರು ಮೊದಲು ಮುಂಗಡ ಹಣ ಕಟ್ಟಬೇಕು ಎಂದು ಒತ್ತಾಯಿಸಿದರೆ, ಅದು ಗಂಭೀರ ಅಪರಾಧವಾಗಲಿದ್ದು, ಸಂಬಂಧಿಸಿದವರಿಗೆ ನೇರವಾಗಿ ಜೈಲು ಶಿಕ್ಷೆ ವಿಧಿಸಲಾಗುವುದು.

ಇತ್ತೀಚಿನ ವರ್ಷಗಳಲ್ಲಿ ಅನೇಕ ಅಪಘಾತ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರೂ, ಮೊದಲು ಹಣ ಕೊಡಿ ಎಂಬ ಕಾರಣಕ್ಕೆ ಚಿಕಿತ್ಸೆ ತಡವಾಗಿ ನೀಡಿದ ಅನೇಕ ಉದಾಹರಣೆಗಳು ಹೊರಬಿದ್ದಿವೆ. ಹಣ ವ್ಯವಸ್ಥೆ ಮಾಡುವ ಹೊತ್ತಿಗೆ ಗಾಯಾಳು ಪ್ರಾಣ ಕಳೆದುಕೊಂಡ ಘಟನೆಗಳು ಕೂಡಾ ನಡೆದಿವೆ. ಇದೇ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರವಾಗಿ ಗಮನಹರಿಸಿ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದೆ.

ಆದೇಶ ಹೊರಡುತ್ತಿದ್ದಂತೆ ವೈದ್ಯ ಸಮುದಾಯದಲ್ಲಿ ಆತಂಕ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಹಣವಿಲ್ಲದೆ ಚಿಕಿತ್ಸೆ ನೀಡುವುದು ವೈದ್ಯರ ನೈತಿಕ ಕರ್ತವ್ಯವಾದರೂ, ಚಿಕಿತ್ಸೆ ನಂತರ ಹಣ ವಸೂಲಿ ಮಾಡುವಲ್ಲಿ ಆಸ್ಪತ್ರೆಗಳಿಗೆ ಆಗಬಹುದಾದ ಕಷ್ಟಗಳ ಬಗ್ಗೆ ವೈದ್ಯರು ಚಿಂತನೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಪ್ರಾಣ ಉಳಿಸಲೇಬೇಕು, ಮತ್ತೊಂದು ಕಡೆ ಆಸ್ಪತ್ರೆಯ ವೆಚ್ಚ ಹೇಗೆ ಪೂರೈಸುವುದು? ಎಂಬ ಪ್ರಶ್ನೆ ಈಗ ವೈದ್ಯರ ನಡುವೆ ಕೇಳಿಬರುತ್ತಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss