ಕರ್ನಾಟಕ ವಿಧಾನಸಭೆ ಗುರುವಾರ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ-2025’ಗೆ ಅಂಗೀಕಾರ ನೀಡಿತು. ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧ, ಗದ್ದಲ ಮತ್ತು ಚರ್ಚೆ ನಡುವೆಯೇ ಮಸೂದೆ ಅಂಗೀಕಾರಕ್ಕೆ ಸಿದ್ಧವಾಗಿದೆ ಅಂತ ಮಸೂದೆ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು
ರಾಜ್ಯದಲ್ಲಿ ದ್ವೇಷ ಭಾಷಣ, ಅಪರಾಧಗಳು ಸಮಾಜದ ಸಾಮರಸ್ಯವನ್ನು ಹಾಳುಮಾಡುತ್ತಿವೆ. ಧರ್ಮ, ಜಾತಿ, ಜನಾಂಗ, ಭಾಷೆ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ ಅಥವಾ ಬುಡಕಟ್ಟು ಜನರ ವಿರುದ್ಧ ದ್ವೇಷವನ್ನು ಹರಡುವವರು ಶಿಕ್ಷೆಗೆ ಒಳಗಾಗಬೇಕು.
ದ್ವೇಷಾಪರಾಧ ಜಾಮೀನುರಹಿತ ಅಪರಾಧವಾಗಿದ್ದು, ನೋಂದಾಯಿತ ಮತ್ತು ನೋಂದಾಯಿತವಲ್ಲದ ಸಂಘಟನೆಗಳು, ವಿದ್ಯುನಮಾಧ್ಯಮಗಳು, ಯೂಟ್ಯೂಬ್ ಚಾನೆಲ್‌ಗಳು, ಪುಸ್ತಕಗಳು, ಚಿತ್ರಗಳು, ಪ್ರಕಟಣೆಗಳು, ಕರಪತ್ರಗಳು ಈ ಮಸೂದೆಯ ವ್ಯಾಪ್ತಿಗೆ ಬರುವುದಾಗಿದೆ” ಎಂದು ವಿವರಿಸಿದರು.
ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಕೇಂದ್ರ ಸರ್ಕಾರ ಜಾರಿಗೆ ತಂದ BNS ಕಾಯ್ದೆಯು ದ್ವೇಷ ಭಾಷಣ ತಡೆಗೆ ಅವಕಾಶ ಕಲ್ಪಿಸಿದೆ. ಹಾಗಿದ್ದರೂ ಎದುರಾಳಿಗಳನ್ನು ಹತ್ತಿಕ್ಕಲು ಮಸೂದೆ ತರಲಾಗುತ್ತಿದೆ’ ಎಂದು ದೂರಿದರು.
‘ಸಚಿವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುತ್ತೇನೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಭರವಸೆ ನೀಡಿದರು. ಅದಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಘೋಷಣೆ ಕೂಗಿದರು. ಈ ವೇಳೆ ಅಶೋಕ ಅವರು ಮಸೂದೆ ಪ್ರತಿ ಹರಿದುಹಾಕಿದರು. ಗದ್ದಲದ ಮಧ್ಯೆಯೇ ಪರಮೇಶ್ವರ ಅವರು ಮಸೂದೆಗೆ ಅಂಗೀಕಾರ ಪಡೆದರು.
ಇನ್ನು ಶಿಕ್ಷೆ ಪ್ರಮಾಣ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ ಮೊದಲ ಬಾರಿಯ ಕೃತ್ಯಕ್ಕೆ 1 ವರ್ಷದಿಂದ 7 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ. ಪುನರಾವರ್ತಿತವಾದರೆ 2 ವರ್ಷದಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲು ಮೊದಲು ಅವಕಾಶ ಕಲ್ಪಿಸಲಾಗಿತ್ತು. ಮಸೂದೆ ಅಂಗೀಕರಿಸುವಾಗ, ಪುನರಾವರ್ತಿತ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು 2 ವರ್ಷದಿಂದ 7 ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




