ದೇಶದ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹದಲ್ಲಿ ಅಧಿಕಾರದ ಕಿತ್ತಾಟ ತೀವ್ರ ರೂಪ ಪಡೆದಿದೆ. ಟಾಟಾ ಟ್ರಸ್ಟ್‌ನಲ್ಲಿ ನೊಯೆಲ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಬಣಗಳ ನಡುವೆ ಸಿಡಿಲುಂಟಾಗಿದೆ. ಈ ಭಿನ್ನಮತದ ಪರಿಣಾಮವಾಗಿ ಟಾಟಾ ಸನ್ಸ್ ನಿರ್ದೇಶಕರ ನೇಮಕಾತಿ ವಿಚಾರದಲ್ಲಿ ಗಂಭೀರ ಅಸ್ಥಿರತೆ ಉಂಟಾಗಿದೆ. ವಿಷಯದ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ಇದೀಗ ಮಧ್ಯ ಪ್ರವೇಶಿಸಿದೆ.
ಟಾಟಾ ಸಮೂಹವನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾದ ಟಾಟಾ ಸನ್ಸ್ ಇದರಲ್ಲಿ ಟಾಟಾ ಟ್ರಸ್ಟ್ ಶೇ.66ರಷ್ಟು ಷೇರು ಹೊಂದಿದೆ. ದಾನ ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ, ಡೈರೆಕ್ಟರ್ ಮಂಡಳಿಗೆ ನೇಮಕಾತಿ ಮಾಡುವ ಸಂಪೂರ್ಣ ಅಧಿಕಾರ ಹೊಂದಿದೆ. ರತನ್ ಟಾಟಾ ಅವರ ಉತ್ತರಾಧಿಕಾರಿ, ಟಾಟಾ ಟ್ರಸ್ಟ್ ಮುಖ್ಯಸ್ಥರಾದ ನೊಯೆಲ್ ಟಾಟಾ ವಿರುದ್ಧ ಮೆಹ್ಲಿ ಮಿಸ್ತ್ರಿ, ಇತರರು ಸೆಡ್ಡು ಹೊಡೆದಿದ್ದು, ಅವರ ಪ್ರಮುಖ ನಿರ್ಧಾರಗಳನ್ನು ಪ್ರಶ್ನಿಸಲು ಆರಂಭಿಸಿದ್ದಾರೆ.
ಈ ಎಲ್ಲಾ ಸಂಘರ್ಷಕ್ಕೆ ಸೆಪ್ಟೆಂಬರ್ 11ರಂದು ನಡೆದ ನಿರ್ಧಾರವೇ ಹಿನ್ನಡೆಯಾಗಿದೆ. ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಗೆ ಮಾಜಿ ರಕ್ಷಣಾ ಕಾರ್ಯದರ್ಶಿ ವಿಜಯ್ ಸಿಂಗ್‌ರನ್ನು ಮರುನೇಮಕ ಮಾಡುವ ಪ್ರಸ್ತಾವನೆ ನೊಯೆಲ್ ಟಾಟಾ ಮತ್ತು ವೇಣು ಶ್ರೀನಿವಾಸನ್ ಇಟ್ಟಿದ್ದರು. ಆದರೆ, ಮೆಹ್ಲಿ ಮಿಸ್ತ್ರಿ, ಡೇರಿಯಸ್ ಖಂಬಾಟಾ, ಜೆಹಾಂಗೀರ್, ಪ್ರಮಿತ್ ಝವೇರಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸತ್ತ ವಿಜಯ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವಂತಾ ಈ ಸಂಘರ್ಷದ ಬೆನ್ನಲ್ಲೇ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ಮಂಗಳವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ನೊಯೆಲ್ ಟಾಟಾ, ಎನ್. ಚಂದ್ರಶೇಖರನ್, ವೇಣು ಶ್ರೀನಿವಾಸನ್ ಹಾಗೂ ಡೇರಿಯಸ್ ಖಂಬಾಟಾ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಹಾಜರಿದ್ದರು.
ಟಾಟಾ ಕಂಪನಿಯು ದೇಶದ ಅತಿದೊಡ್ಡ ಕಾರ್ಪೊರೇಟ್ ಕಂಪನಿಯಾಗಿದ್ದು, ಐಟಿಯಿಂದ ಹಿಡಿದು ಅಡುಗೆ ಉಪ್ಪಿನ ವರೆಗೆ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಟಾಟಾ ಗ್ರೂಪ್ ದೇಶದಲ್ಲಿ 38 ಲಕ್ಷ ಕೋಟಿ ರು. ಮೌಲ್ಯದ 400 ಕಂಪನಿಗಳನ್ನು ಮುನ್ನಡೆಸುತ್ತಿದೆ. ಈ ಗ್ರೂಪ್‌ನಲ್ಲಿನ ಅಸ್ಥಿರತೆ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಮಧ್ಯಪ್ರವೇಶಿಸಿದೆ. ಗುರುವಾರ ಟ್ರಸ್ಟಿ ಗಳು ಮತ್ತೆ ಸಭೆ ಸೇರಲಿದ್ದು, ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.