ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಒಟ್ಟು 10 ಪ್ರಮುಖ ದಾಖಲೆಗಳನ್ನು ಒಪ್ಪುವಂತೆ ಕೋರಿ, ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣವು ನ್ಯಾಯಾಧೀಶ ಐ.ಪಿ. ನಾಯ್ಕ್ ಅವರ ಮುಂದೆ ವಿಚಾರಣೆಗೆ ಬಂದಾಗ, ಸರ್ಕಾರಿ ಅಭಿಯೋಜಕರು ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 294 ಅಡಿಯಲ್ಲಿ ಅರ್ಜಿ ಸಲ್ಲಿಸಿ, ಈ ದಾಖಲೆಗಳನ್ನು ನ್ಯಾಯಾಲಯದ ದಾಖಲೆಗೆ ಸೇರಿಸಲು ವಿನಂತಿಸಿದರು.
ಸರ್ಕಾರಿ ಅಭಿಯೋಜಕರು, ವಿಚಾರಣೆಗೆ ಒಳಪಡಿಸಬಹುದಾದ ಸಾಕ್ಷಿಗಳು ಹಾಗೂ ಸಾಕ್ಷ್ಯಾಧಾರಗಳನ್ನು ಒಳಗೊಂಡ 10 ದಾಖಲೆಗಳು ಅತ್ಯಂತ ಮಹತ್ವದ್ದಾಗಿದ್ದು, ಅವುಗಳನ್ನು ಆರೋಪಿಗಳ ಒಪ್ಪಿಗೆ ಮೇರೆಗೆ ಅಂಗೀಕರಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಯಾಗಿ ಆರೋಪಿಗಳ ಪರ ವಕೀಲರು, “ದಾಖಲೆಗಳನ್ನು ಪರಿಶೀಲಿಸಲು ಮತ್ತು ನಿಲುವು ತಿಳಿಸಲು ಎರಡು ವಾರಗಳ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ನ್ಯಾಯಾಧೀಶರು ಅದನ್ನು ಅಂಗೀಕರಿಸಿ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದರು. ಈ ವೇಳೆ ಮುಖ್ಯ ಆರೋಪಿ ದರ್ಶನ್ ಸೇರಿದಂತೆ ಜೈಲಿನಲ್ಲಿ ಇರುವ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು.
ಈ ಪ್ರಕರಣದಲ್ಲಿ 4ನೇ ಆರೋಪಿ ರಾಘವೇಂದ್ರ ಮತ್ತು 16ನೇ ಆರೋಪಿ ಕೇಶವಮೂರ್ತಿ ಹೊರತುಪಡಿಸಿ ಉಳಿದ ಎಂಟು ಮಂದಿ ಆರೋಪಿಗಳು ಜಾಮೀನು ಮೇಲೆ ಹೊರಗೆ ಇದ್ದು, ಖುದ್ದಾಗಿ ವಿಚಾರಣೆಗೆ ಹಾಜರಾದರು. ಕೇಶವಮೂರ್ತಿ ಹಾಗೂ ರಾಘವೇಂದ್ರ ಪರ ವಕೀಲರು ವಿಚಾರಣೆಯಿಂದ ವಿನಾಯ್ತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಇದೇ ವೇಳೆ ಸರ್ಕಾರಿ ವಕೀಲರು, 6ನೇ ಆರೋಪಿ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಸಲ್ಲಿಸಿರುವ ಜೈಲು ಅಧಿಕಾರಿಗಳ ಅರ್ಜಿಯನ್ನೂ ನ್ಯಾಯಾಧೀಶರ ಗಮನಕ್ಕೆ ತಂದರು.
ಜೂನ್ 8ರಂದು ನಡೆದ ಘಟನೆಯಲ್ಲಿ, 2ನೇ ಆರೋಪಿ ದರ್ಶನ್, ರೇಣುಕಾಸ್ವಾಮಿಯನ್ನು ತನ್ನ ಪತ್ನಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ಬೈದು, ಅವಮಾನ ಉಂಟುಮಾಡಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಆರೋಪ ಪ್ರಕಾರ, ದರ್ಶನ್ ಮತ್ತು ಇತರರು ರೇಣುಕಾಸ್ವಾಮಿಗೆ ಮುಖಕ್ಕೆ ಹೊಡೆದು, ಶೂ ಕಾಲಿನಿಂದ ಎದೆಗೆ ಒದ್ದು, ಮರದ ರೆಂಬೆಯಿಂದ ಹಲ್ಲೆ ನಡೆಸಿ, ಕೊನೆಗೆ ಕೊಲೆಗೈದಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 149, 355, 302 ಹಾಗೂ 201ರಡಿ ಸಾಕ್ಷ್ಯನಾಶದ ಆರೋಪಗಳು ನಿಗದಿಪಡಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




