50 ಲಕ್ಷ ರೈತರ ಹೋರಾಟ : ಸರ್ಕಾರಕ್ಕೆ ಖಡಕ್ ಎಚ್ಚರಿಕೆ

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಕದನ ತೀವ್ರ ಸ್ವರೂಪ ಪಡೆದಿದೆ. ಕಬ್ಬಿಗೆ ಸೂಕ್ತ ದರ ನೀಡುವಂತೆ ಕಳೆದ ಏಳು ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರು ಈಗ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಪರವಾಗಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ರೈತರ ಜೊತೆ ಮಾತುಕತೆ ನಡೆಸಿದರು. ಆದರೆ ಸರ್ಕಾರದ ಯಾವುದೇ ಸಂಧಾನ ಸಾಧ್ಯವಾಗಲಿಲ್ಲ. ಸಚಿವರು ಕಬ್ಬಿನ ಬೆಲೆ ನಿಗದಿ ಮಾಡುವ ಅಧಿಕಾರ ನನ್ನ ಬಳಿಯಿಲ್ಲ. ಮುಖ್ಯಮಂತ್ರಿಗೆ ಈ ವಿಚಾರ ತಿಳಿಸುತ್ತೇನೆ ಎಂದಿದ್ದು, ರೈತರ ಕೋಪಕ್ಕೆ ಕಾರಣವಾಯಿತು.

ನಾವು ಸರ್ಕಾರಕ್ಕೆ ಗುರುವಾರ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ನೀಡಿದ್ದೇವೆ. ಅಲ್ಲಿವರೆಗೆ ಸೂಕ್ತ ಬೆಲೆ ಘೋಷಣೆ ಆಗದಿದ್ದರೆ, ನವೆಂಬರ್ 7ರಂದು ರಾಜ್ಯಾದ್ಯಂತ 50 ಲಕ್ಷ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಹೋರಾಟ ತೀವ್ರಗೊಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಚಿವರು ಮಾಹಿತಿ ಕೊರತೆಯಿಂದ ಸ್ಥಳಕ್ಕೆ ಬಂದಿದ್ದರು. ಆದರೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಒಂದು ಟನ್‌ಗೆ 3,500 ರೂ. ದರ ಸಿಕ್ಕರೆ ಮಾತ್ರ ಹಿಂಪಡೆಯುತ್ತೇವೆ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಹೇಳಿದರು.

ಇದಕ್ಕೆ ಬೆಂಬಲವಾಗಿ ಮಹಾರಾಷ್ಟ್ರದ ಪ್ರಸಿದ್ಧ ಹುಲಜಂತಿ ಮಾಳಿಂಗರಾಯ ಮಠದ ಮಠಾಧೀಶರು ಕೂಡ ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದಾರೆ. “ರೈತರಿಲ್ಲದೆ ಮಠಗಳು, ಮಠಾಧೀಶರು ಇರಲು ಸಾಧ್ಯವಿಲ್ಲ. ಸರ್ಕಾರವು ಬೇಗನೆ ರೈತರ ಬೇಡಿಕೆಗೆ ಸ್ಪಂದಿಸಬೇಕು” ಎಂದು ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ರಾಜ್ಯದಲ್ಲೇ ಅತೀ ಹೆಚ್ಚು ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಅಹೋರಾತ್ರಿ ಧರಣಿ ಮುಂದುವರಿಸಿದ್ದು, ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ಟನ್‌ ದರ ನೀಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಎಸ್‌ಪಿ ನೇತೃತ್ವದಲ್ಲಿ ನಡೆದ ಮಾತುಕತೆ ವಿಫಲವಾಗಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ರೈತರ ಕೋಪ ಉಕ್ಕಿಬಂದಿದೆ. ಈಗ ಕಬ್ಬಿನ ದರ ಹೋರಾಟ ಕೇವಲ ಬೇಡಿಕೆಯ ಮಟ್ಟದಲ್ಲಿಲ್ಲ, ಇದು ರೈತರ ಗೌರವ ಮತ್ತು ಬದುಕಿನ ಹೋರಾಟವಾಗಿ ಮಾರ್ಪಟ್ಟಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author