ತೆಲಂಗಾಣದಲ್ಲಿ ಯುವಕನೋರ್ವ ಕ್ರಿಕೇಟ್ ಬೆಟ್ಟಿಂಗ್ ಆಗಿ ಲಕ್ಷ ಲಕ್ಷ ಸೋತು, ಅದನ್ನ ತೀರಿಸಲು ತಾಯಿ ಮತ್ತು ತಂಗಿಯ ಜೀವ ತೆಗೆದ ಘಟನೆ ನಡೆದಿದೆ. 23 ವರ್ಷದ ಸಾಯಿನಾಥ್ ರೆಡ್ಡಿ, ತನ್ನ ತಾಯಿ ಸುನೀತಾ ರೆಡ್ಡಿ ಮತ್ತು ತಂಗಿ ಅನುಜಾ ರೆಡ್ಡಿಯನ್ನ ವಿಷ ನೀಡಿ ಕೊಂದಿದ್ದಾರೆ. ಸದ್ಯ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.
ಆಗಿದ್ದೇನು..?
ಎಮ್ ಟೆಕ್ ವಿದ್ಯಾರ್ಥಿಯಾಗಿದ್ದ ಸಾಯಿನಾಥ್, ಕ್ರಿಕೇಟ್ ಬೆಟ್ಟಿಂಗ್‌ನಲ್ಲಿ 20 ಲಕ್ಷ ಸೋತಿದ್ದ. ಈ ದುಡ್ಡನ್ನ ನೀಡುವುದಕ್ಕಾಗಿ ತನ್ನ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದ. ಆದ್ರೆ ಇದಕ್ಕೆ ತಾಯಿ ಒಪ್ಪುವುದಿಲ್ಲವೆಂದು ಗೊತ್ತಾಗಿ, ತಾಯಿ ಮತ್ತು ತಂಗಿಯ ಊಟದಲ್ಲಿ ವಿಷ ಬೆರೆಸಿ, ಅವರು ನರಳುವಾಗ ಆಸ್ಪತ್ರೆಗೆ ಕರೆದೊಯ್ಯುವ ನಾಟಕವಾಡಿ ಲೇಟಾಗಿ ಆಸ್ಪತ್ರೆ ಸೇರಿಸಿದ್ದಾನೆ. ಚಿಕಿತ್ಸೆ ಫಲಿಸದೇ ತಾಯಿ ತಂಗಿ ಸಾವನ್ನಪ್ಪಿದ್ದಾರೆ.
ಈತನ ತಂದೆ 3 ವರ್ಷದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದಕ್ಕಾಗಿ ಸುನಿತಾ ರೆಡ್ಡಿಗೆ ಪರಿಹಾರವಾಗಿ 20 ಲಕ್ಷ ದುಡ್ಡು ಬಂದಿತ್ತು. ಕಳೆದ ಮೂರು ವರ್ಷದಲ್ಲಿ ತನ್ನ ಚಟಕ್ಕೆಂದು ಈತ ಆ 20 ಲಕ್ಷ ಕೂಡ ತಾಯಿಗೆ ಗೊತ್ತಿಲ್ಲದೇ, ತೆಗೆದುಕೊಂಡಿದ್ದಾನೆ. ಅಲ್ಲದೇ, ತಾಯಿಯ ಗಮನಕ್ಕೆ ಬಾರದಂತೆ ಆಕೆಯ ಒಡವೆಗಳನ್ನ ಕೂಡ ಮಾರಿದ್ದಾನೆ.
ಆಸ್ಪತ್ರೆಗೆ ತಾಯಿ ಮತ್ತು ತಂಗಿಯನ್ನ ಸೇರಿಸುವಾಗ ಈತನ ಹಾವಭಾವ ಸಂಶಯ ತರಿಸುವಂತಿತ್ತು ಎಂದು ಸಂಬಂಧಿಕರು ಹೇಳಿದಾಗ, ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಸಾಯಿನಾಥ್, ತಾನೇ ಬೆಟ್ಟಿಂಗ್ ದುಡ್ಡು ಭರಿಸಲು ಆಸ್ತಿ ಮಾರಬೇಕಾದ ಕಾರಣಕ್ಕೆ, ತಾಯಿ ಮತ್ತು ತಂಗಿಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.