ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ರಾಜಕೀಯ ತೀವ್ರತೆ ಹೆಚ್ಚಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು, ರಾಜ್ಯ ಸರ್ಕಾರದ ಲೋಪಗಳನ್ನು ಬಯಲಿಗೆಳೆದಿದ್ದಾರೆ. ಕಬ್ಬು ಬೆಲೆ, ವಿದ್ಯುತ್ ದರ ಮತ್ತು ನೀರಾವರಿ ನೀತಿಯ ಕುರಿತು ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಜೋಶಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಜೋಶಿ ಅವರ ಪ್ರಕಾರ, ಕಬ್ಬು ಬೆಳೆಗಾರರು ಎದುರಿಸುತ್ತಿರುವ ತೊಂದರೆಗಳಿಗೆ ಕೇಂದ್ರ ಸರ್ಕಾರವಲ್ಲ, ರಾಜ್ಯ ಸರ್ಕಾರವೇ ಕಾರಣ. ಕೇಂದ್ರವು ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ವೈವಿಧ್ಯತೆ ಎರಡನ್ನೂ ಸುಧಾರಿಸಿದೆ. ಆದರೆ ಪಾವತಿ ಜಾರಿ, ನೀರಾವರಿ ಮತ್ತು ಸಬ್ಸಿಡಿ ವಿತರಣೆಯ ಹೊಣೆ ರಾಜ್ಯದದ್ದೇ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ರಾಜ್ಯವು ಸರಿಯಾದ ನೀತಿ ಜಾರಿಗೊಳಿಸದ ಕಾರಣ ಸಕ್ಕರೆ ಕಾರ್ಖಾನೆಗಳು ಮತ್ತು ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೋಶಿ ರಾಜ್ಯದ ವಿದ್ಯುತ್ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಕರ್ನಾಟಕ ಇನ್ನೂ 2017ರ PPA ಒಪ್ಪಂದದಲ್ಲೇ ಇದ್ದು, ಮಹಾರಾಷ್ಟ್ರ ಹೊಸ ಒಪ್ಪಂದಗಳನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ವಿದ್ಯುತ್ ದರ ಏರಿಕೆಯಿಂದ ರೈತರ ಆದಾಯಕ್ಕೆ ನೇರ ಹೊಡೆತ ಬಿದ್ದಿದೆ. ಸಾರಿಗೆ ವೆಚ್ಚ, ರಸ್ತೆ ತೆರಿಗೆ, ಎನರ್ಜಿ ಸೆಸ್ ಇವೆಲ್ಲವೂ ರೈತರ ಭಾರ ಹೆಚ್ಚಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವ ₹355 ಕ್ವಿಂಟಲ್‌ನ FRP, ನ್ಯಾಯಯುತ ಮತ್ತು ಲಾಭದಾಯಕ ಬೆಲೆ. ರೈತರ ಹಿತಕ್ಕಾಗಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರವೆಂದು ಜೋಶಿ ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ SAP ಘೋಷಿಸದೆ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ರೈತರ ಹಿತ ಕಾಯುತ್ತಿದೆ, ಆದರೆ ರಾಜ್ಯ ಸರ್ಕಾರ ರೈತರ ಮೇಲಿನ ತೆರಿಗೆ ಮತ್ತು ದರ ಭಾರವನ್ನು ಹೆಚ್ಚಿಸಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರದ ಎಥೆನಾಲ್ ಮಿಶ್ರಣ ಯೋಜನೆಯಿಂದ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಮೂಲ ದೊರಕಿದರೆಂದು ಜೋಶಿ ಹೇಳಿದ್ದಾರೆ. ಆದರೆ, ರಾಜ್ಯದ ಹಣಕಾಸು ನೀತಿಗಳು ಕಬ್ಬು ಕ್ಷೇತ್ರದ ಸಂಕಷ್ಟವನ್ನು ಮತ್ತಷ್ಟು ಉಲ್ಬಣಿಸುತ್ತಿವೆ ಎಂದು ಟೀಕಿಸಿದ್ದಾರೆ. ಸರ್ಕಾರದ ಲೋಪವನ್ನು ಕೇಂದ್ರದ ಮೇಲೆ ಹೊರಿಸುವುದು ನ್ಯಾಯವಲ್ಲ ಎಂದು ಜೋಶಿ ಕಿಡಿಕಾರಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

