Thursday, November 13, 2025

Latest Posts

ಮುಧೋಳದಲ್ಲಿ ‘ಬೆಂಕಿ’ ಹೊತ್ತಿ ಉರಿದ ಕಬ್ಬಿನ ಕಿಚ್ಚು!

- Advertisement -

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಉಗ್ರ ಸ್ವರೂಪ ಪಡೆದಿದೆ. ಕಬ್ಬಿನ ದರ ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದ ರೈತರು, ಕಾರ್ಖಾನೆಗೆ ಹೊರಟಿದ್ದ ಕಬ್ಬು ತುಂಬಿದ ಟ್ರಾಕ್ಟರ್‌ನ್ನು ಮಧ್ಯೆ ನಿಲ್ಲಿಸಿ, ಪಲ್ಟಿ ಮಾಡಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ತೀವ್ರಗೊಂಡ ಪರಿಣಾಮ, ಟ್ರಾಕ್ಟರ್ ಜೊತೆಗೆ ಕಬ್ಬು ಸಂಪೂರ್ಣ ಭಸ್ಮವಾಗಿದ್ದು, 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಬೆಂಕಿಗಾಹುತಿಯಾಗಿ ಧಗಧಗಿಸುತ್ತಿವೆ. ಟ್ರ್ಯಾಕ್ಟರ್ ಸೇರಿ ಹಲವು ಬೈಕ್ ಗಳಿಗೂ ಬೆಂಕಿ ಹಚ್ಚಲಾಗಿದೆ.

ಈ ಘಟನೆಯ ನಂತರ ಪರಿಸ್ಥಿತಿ ತೀವ್ರಗೊಂಡಿದ್ದು, ನೂರಾರು ರೈತರು ಸಮೀರವಾಡಿ ಸಕ್ಕರೆ ಕಾರ್ಖಾನೆಯತ್ತ ಮುತ್ತಿಗೆ ಹಾಕಿದ್ದಾರೆ. ರೈತರು ಪ್ರತಿ ಟನ್‌ ಕಬ್ಬಿಗೆ ₹3,300 ರೂ. ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರವು ₹3,250 ರೂ. ನೀಡಲು ಒಪ್ಪಿಕೊಂಡಿದ್ದರೂ, ರೈತರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಬಾಕಿ ಬಿಲ್ ಪಾವತಿಗೆ ರೈತರು ಪಟ್ಟು ಹಿಡಿದಿದ್ದಾರೆ.

ಮಹಾಲಿಂಗಪುರ ಹೊರವಲಯದಲ್ಲಿ ನಡೆದ ಈ ಘಟನೆ ರೈತರ ಹೋರಾಟಕ್ಕೆ ಹೊಸ ತೀವ್ರತೆಯನ್ನು ತಂದಿದೆ. ಕಳೆದ ಕೆಲವು ವಾರಗಳಿಂದಲೇ ಕಬ್ಬಿನ ದರ ಕುರಿತ ಅಸಮಾಧಾನ ಹೆಚ್ಚಾಗಿದ್ದರೂ, ಸರ್ಕಾರದಿಂದ ಸ್ಪಷ್ಟ ನಿರ್ಧಾರ ಬರದ ಕಾರಣ ರೈತರು ಟ್ರಾಕ್ಟರ್ ಹಾಗೂ ಎತ್ತಿನ ಬಂಡಿ ರ್ಯಾಲಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಸಹ ರೈತರು ಮುಧೋಳ ನಗರದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಭಾರೀ ರ್ಯಾಲಿ ನಡೆಸಿದ್ದರು. ಆದರೆ ಗಡುವು ಮೀರುತ್ತಿದ್ದಂತೆ ರೈತರ ಸಹನೆ ಕಟ್ಟೆ ಒಡೆದಿದೆ. ಇದೀಗ ಮುಧೋಳ ಹಾಗೂ ಸಮೀರವಾಡಿ ಪ್ರದೇಶದಲ್ಲಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸ್ಥಳೀಯ ಆಡಳಿತ ಚುರುಕಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss