ಮೈಸೂರು ಜಿಲ್ಲೆಯಲ್ಲಿ 2025ರ ಅಕ್ಟೋಬರ್ 31ರವರೆಗೆ 94 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಏಳು ಮಂದಿ ರೈತ ಮಹಿಳೆಯರು ಸೇರಿದ್ದಾರೆ. 2023ರಿಂದ ಈವರೆಗೆ ಒಟ್ಟಾರೆ 256 ರೈತರು ಸಾವನ್ನಪ್ಪಿದ್ದು, 15 ಮಹಿಳಾ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಅಂಕಿ ಅಂಶಗಳನ್ನು ಮೈಸೂರು ಜಿಲ್ಲಾಡಳಿತವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಲ್ಲಿಸಿದೆ.
ಈ 256 ಪ್ರಕರಣಗಳಲ್ಲಿ 212ಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿದೆ; ಉಳಿದ 44 ಪ್ರಕರಣಗಳ ತನಿಖೆ ಮುಂದುವರಿದಿದೆ. 190 ಮಂದಿ ಸಾಲ ತೀರಿಸಲಾಗದೆ ಕಳವಳಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಉಳಿದ 66 ರೈತರು ಇತರ ಕಾರಣಗಳಿಂದ ಸಾವನ್ನಪ್ಪಿದ್ದಾರೆ.
ರೈತ ಮಹಿಳೆಯರ ಆತ್ಮಹತ್ಯೆ ಪ್ರಮಾಣ ವಾರ್ಷಿಕವಾಗಿ ಹೆಚ್ಚುತ್ತಿರುವುದು ಆತಂಕಕಾರಿ. 2023ರಲ್ಲಿ 3, 2024ರಲ್ಲಿ 5, ಮತ್ತು 2025ರ ಅಕ್ಟೋಬರ್‌ವರೆಗೆ 7 ಮಹಿಳಾ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತ ಮುಖಂಡರ ಪ್ರಕಾರ, ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೆ, ಬೆಳೆ ವಿಫಲವಾದಾಗ ಸಾಲದ ಬಾಧೆ, ಸಾಲ ವಸೂಲಾತಿ ಒತ್ತಡ, ಹಾಗೂ ಕಾಡುಪ್ರಾಣಿಗಳಿಂದ ಬೆಳೆ ಹಾನಿ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಸರ್ಕಾರವು ₹5 ಲಕ್ಷ ಪರಿಹಾರ, ಮಕ್ಕಳ ಶಿಕ್ಷಣ ಸಹಾಯ, ನಿವೇಶನ–ಗೃಹ ನೆರವು, ವಿಧವಾ ವೇತನ ಸೇರಿದಂತೆ ಪರಿಹಾರ ಕ್ರಮಗಳನ್ನು ಜಾರಿಗೆ ತರುತ್ತಿದೆ. ಆದರೆ ಜಾಗೃತಿ ಕಾರ್ಯಕ್ರಮಗಳಿದ್ದರೂ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗದಿರುವುದು ಚಿಂತಾಜನಕವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

