Saturday, July 27, 2024

Latest Posts

ಮಂಡ್ಯದಲ್ಲಿ ಸುಮಕ್ಕ ಭರ್ಜರಿ ವಿಜಯೋತ್ಸವ- ಜನತೆಗೆ ಸಂಸದೆ ಕೃತಜ್ಞತೆ

- Advertisement -

ಮಂಡ್ಯ: ಜಿದ್ದಾಜಿದ್ದಿನ ಕಣದಲ್ಲಿ ಸ್ಪರ್ಧಿಸಿ ಕೊನೆಗೂ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಸುಮಲತಾರನ್ನ ಸಂಸದೆಯನ್ನಾಗಿ ಮಾಡಿದ ಮಂಡ್ಯ ಜನತೆಗೆ ಇಂದು ಕೃತಜ್ಞತೆ ಸಲ್ಲಿಸೋ ಸಲುವಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ನೆನಪಿರಲಿ ಪ್ರೇಮ್ ಭಾಗವಹಿಸಿದ್ರು.

ಸ್ವಾಭಿಮಾನವನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಅಭಿನಂದಿಸೋ ಸಲುವಾಗಿ ಮಂಡ್ಯದ ಸಿಲ್ವರ್ ಜ್ಯುಬಿಲಿ ಮೈದಾನದಲ್ಲಿ ನಡೆದ ವಿಜಯೋತ್ಸವದ ಜೊತೆ ನಟ ದಿವಂಗತ ಅಂಬರೀಷ್ ಹುಟ್ಟಹಬ್ಬವನ್ನೂ ಆಚರಿಸಲಾಯ್ತು.

ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ನಾನು ಯಾರು ಅಂತ ಕೇಳಿದ್ದವರಿಗೆ ಇಂದು ನಾನು ಉತ್ತರ ನೀಡುತ್ತಿದ್ದೇನೆ. ನಾನು ಮಂಡ್ಯದ ಸೊಸೆ, ನಾನು ಅಂಬರೀಶ್ ಧರ್ಮಪತ್ನಿ, ಮಂಡ್ಯದಿಂದ ಲೋಕಸಭಾ ಸಂಸದೆ.ಇದಕ್ಕೆ ಕಾರಣ ನಿಮ್ಮೆಲ್ಲರ ಆಶೀರ್ವಾದ. ಈ ಗೆಲುವು ನನ್ನ ಗೆಲುವಲ್ಲ ಮಂಡ್ಯದ ಪ್ರೀತಿಯ ಅಂಬರೀಶಣ್ಣನ ಗೆಲುವು.ನನಗಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು.ಪ್ರತಿಯೊಬ್ಬ ಮಂಡ್ಯ ಮಹಿಳೆಯ ಗೆಲುವು ಅಂದ್ರು.

ನನಗೆ ಬೆಂಬಲಿಸಿದ ರೈತ ಸಂಘದ ಗೆಲುವು, ರಾಜ್ಯದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಮಂಡ್ಯದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸದ ಬಿಜೆಪಿಯ ಗೆಲುವು. ಅಷ್ಟು ಮಾತ್ರವಲ್ಲ, ನನಗೆ ಕಾಂಗ್ರೆಸ್ ಬಿಜೆಪಿ, ಜೆಡಿಎಸ್, ಸ್ವಾಭಿಮಾನಿ ಜೆಡಿಎಸ್ ಪಕ್ಷದಿಂದಲೂ ಬೆಂಬಲ ಸಿಕ್ಕಿದೆ ಹೀಗಾಗಿ ಸರ್ವಪಕ್ಷಗಳ ಗೆಲುವು ಅಂತ ಹೇಳಿದ್ರು.

ಮಂಡ್ಯ ಜಿಲ್ಲೆ ಇತಿಹಾಸದ ಮೇಲೆ ಇತಿಹಾಸ ಬರೆದಿದೆ

ಸ್ವಾಭಿಮಾನವೇ ಹಣಕ್ಕಿಂತ ಮುಖ್ಯ ಅಂತ ತೋರಿಸಿದ್ದೀರಾ. ಸ್ವಾಭಿಮಾನದ ಭಿಕ್ಷೆ ಬೇಡಿದ್ದ ನನಗೆ ಗೆಲುವು ತಂದುಕೊಟ್ಟಿದ್ದೀರ. ದೇಶದಲ್ಲಿ 222 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ರು ಆದ್ರೆ ಗೆದ್ದಿದ್ದು ಮಾತ್ರ ಒಂದೇ ಸ್ಥಾನ ಅದು ಮಂಡ್ಯದಲ್ಲೇ. ಇದು ಮಂಡ್ಯ ಸೃಷ್ಟಿಸಿದ ಇತಿಹಾಸ ಅಂದ್ರು. ಪ್ರಪಂಚಕ್ಕೆ ಮಂಡ್ಯ ಏನು ಅನ್ನೋದನ್ನ ತೋರಿಸಿದ್ದೀರಿ. ಭಾರತವೇ ತಿರುಗಿ ನೋಡುವಂತಹ ಇತಿಹಾಸ ಇಲ್ಲಿ ನಡೆದಿದೆ.ನಿಮಗೆ ಧನ್ಯವಾದ ಅಂದರೆ ಅದು ತುಂಬಾ ಸಣ್ಣಪದ. ನಿಮ್ಮ ಋಣ ನಾನು ಹೇಗೆ ತಿರಿಸಲಿ ಅಂದ್ರು.

ವಿರೋಧಿಗಳಿಗೆ ಜನರೇ ಪಾಠ ಕಲಿಸಿದ್ದಾರೆ

ನಾನಿನ್ನೂ ಸಂಸದೆಯಾಗಿ ಪ್ರಮಾಣವಚನವನ್ನೇ ತೆಗೆದುಕೊಂಡಿಲ್ಲ ಆಗಲೇ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ಆದ್ರೆ ನಾವು ಪ್ರಚಾರದ ಸಮಯದಲ್ಲೂ ಕೂಡ ನಾವು ಯಾವ ಆರೋಪಗಳಿಗಾಗಲೀ, ಕಟುವಾದ ಮಾತುಗಳಿಗಾಗಲೀ ಪ್ರತಿಕ್ರಿಯೆ ಕೂಡ ನೀಡಿಲ್ಲ. ನಾವು ಒಳ್ಳೇ ಮಾರ್ಗದಲ್ಲಿ ನಡೆದೆವು, ಇವೆಲ್ಲವನ್ನೂ ಜನತೆ ಗಮನಿಸುತ್ತಿದ್ದರು. ಅವರು ಆಡಿದ ಮಾತುಗಳಿಗೆಲ್ಲಾ ಜನರೇ ಉತ್ತರಿಸಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಪಾದಾಬಿವಂದನೆಗಳು ಅಂತ ಸುಮಲತಾ ಭಾವುಕರಾಗಿ ನುಡಿದ್ರು.

ಇದು ನಿಮ್ಮ ಗೆಲುವು ಆದ್ರೆ ನನಗೆ ಜವಾಬ್ದಾರಿ

ನಾನಿಲ್ಲಿ ಬಂದಿರೋದು ಸಂಭ್ರಮ ಆಚರಿಸೋದಕ್ಕಲ್ಲ, ಇದು ನಿಮ್ಮೆಲ್ಲರ ಗೆಲುವು ಆದ್ರೆ ನನಗೆ ಇದು ಒಂದು ದೊಡ್ಡ ಜವಾಬ್ದಾರಿ. ಚುನಾವಣೆಯಲ್ಲಿ ನನ್ನ ಮೇಲೆ ಒಂದು ಕಪ್ಪು ಚುಕ್ಕಿಯೂ ಬಂದಿಲ್ಲ. ನಾನು ಅಂಬರೀಶ್ ಮಾರ್ಗದರ್ಶನದಲ್ಲಿ ಅವರಂತೆಯೇ ನಡೆಯುತ್ತಿದ್ದೇನೆ. ಕಾವೇರಿ ವಿಚಾರ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೇ ರಾಜೀನಾಮೆ ನೀಡಿದವರು ಅಂಬರೀಶ್ ಅಂತ ಪತಿಯನ್ನು ನೆನೆದರು.

ನಾನು ಬೇರೆ ರಾಜಕಾರಣಿಗಳ ಹಾಗೆ ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆ ನೀಡಿಲ್ಲ. ಆದ್ರೆ ನಿಮ್ಮಲ್ಲಿ ನಾನು ಅವತ್ತು ಭಾವನಾತ್ಮಕವಾಗಿ ನನಗೆ ಮತ ಹಾಕುವಂತೆ ಹೇಳಿದ್ದೆ ಅಷ್ಟೆ.

ಅಂಬಿ ಹುಟ್ಟುಹಬ್ಬ ಇನ್ಮುಂದೆ ಮಂಡ್ಯದಲ್ಲೇ- ಮಾತು ಕೊಟ್ಟ ಸುಮಲತಾ

30 ವರ್ಷದಿಂದ ನಮಗೆ ಈ ದಿನ ಸಂಭ್ರಮದ ದಿನವಾಗಿರುತ್ತಿತ್ತು. ಅಂಬರೀಶ್ ಹುಟ್ಟುಹಬ್ಬ ಆಚರಿಸಲು ರಾಜ್ಯದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಬರುತ್ತಿದ್ರಿ. ಅಂಬಿ ಹುಟ್ಟುಹಬ್ಬವನ್ನ ಮಂಡ್ಯ ಜನರು ಹಬ್ಬದಂತೆ ಆಚರಿಸುತ್ತಿದ್ರಿ. ಆದ್ರೆ ಇನ್ನು ಮುಂದೆ ನನ್ನ ಉಸಿರಿರೋವರೆಗೂ ಅಂಬಿ ಹುಟ್ಟುಹಬ್ಬವನ್ನ ಇಲ್ಲೇ ಆಚರಿಸುತ್ತೇನೆ. ಅಂಬರೀಶ್ ಗಳಿಸಿರೋ ಅಭಿಮಾನ ಪ್ರೀತಿ ಎಲ್ಲಾ ನಿಮ್ಮಿಂದಲೇ, ನಿಮ್ಮಿಂದಲೇ ನಾನಿಲ್ಲಿ ನಿಂತಿದ್ದೇನೆ ಅಂತ ಸುಮಲತಾ ಹೇಳಿದ್ರು.

- Advertisement -

Latest Posts

Don't Miss