ಸೂಪರ್ ಸ್ಟಾರ್ ಆಶೀರ್ವಾದ ಪಡೆದ ಕನ್ನಡ ಚಿತ್ರ ನಿರ್ದೇಶಕ ರಾಮಚಂದ್ರ ವೈದ್ಯ -ಮಾರ್ಚ್ ನಲ್ಲಿ ‘ಒಂದಂಕೆ ಕಾಡು’ ರಿಲೀಸ್
ಕಾಡು ಬಗೆದಷ್ಟು ನಿಗೂಢವೆನಿಸುವ ಸೃಷ್ಟಿ. ಮೇಲ್ನೋಟಕ್ಕೆ ತಣ್ಣಗೆ, ಹಸಿರಾಗಿ ಕಾಣುವ ಕಾಡಿನ ಒಳಹೊಕ್ಕರೆ ಊಹೆಗೂ ಮೀರಿದ ವಿಷಯಗಳು, ವಿವರಗಳು ಕಾಣಸಿಗುತ್ತದೆ. ಈಗ ಇದೇ ಕಥಾವಸ್ತುವಿನ ಮೇಲೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವೊಂದು ತೆರೆಗೆ ಬರುತ್ತಿದೆ. ಆ ಚಿತ್ರದ ಹೆಸರೇ ‘ಒಂದಂಕೆ ಕಾಡು’. ಕನ್ನಡ ಕಿರುತೆರೆಯಲ್ಲಿ ನಿರ್ದೇಶಕರಾಗಿ ಸಾಕಷ್ಟು ಹೆಸರು, ಅನುಭವ, ಯಶಸ್ಸು ಗಳಿಸಿದ ರಾಮಚಂದ್ರ ವೈದ್ಯ ಇದೀಗ ‘ಒಂದಂಕೆ ಕಾಡು’ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.
‘ಒಂದಂಕೆ ಕಾಡು’ ಚಿತ್ರಕ್ಕೆ ರಾಮಚಂದ್ರ ವೈದ್ಯ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ತೆಲುಗಿನಲ್ಲಿ ‘ಅನಗನಗಾ ಒಕ ಅಡವಿ’ ಎಂಬ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ನಿರ್ದೇಶಕ ರಾಮಚಂದ್ರ ವೈದ್ಯ ಅವರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಮಚಂದ್ರ ವೈದ್ಯ ನಮ್ಮ ಸ್ನೇಹಿತರೊಬ್ಬರು ಯಾವುದೋ ಕಾರಣಕ್ಕೆ ರಜನೀಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನ ಸಿನಿಮಾ ಬಗ್ಗೆ ರಜನೀಕಾಂತ್ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಅದನ್ನು ಕೇಳಿದ ಬಳಿಕ ರಜನೀಕಾಂತ್ ಒಂದು ಪುಸ್ತಕಕ್ಕೆ ತಮ್ಮ ಆಟೋಗ್ರಾಫ್ ಹಾಕಿ ಇದು ಆ ಯುವ ನಿರ್ದೇಶಕರಿಗೆ ನನ್ನ ಕಾಣಿಕೆ ಎಂದಿದ್ದಾರೆ. ಇದೊಂದು ಜೀವನಸ್ಪೂರ್ತಿಯ ಪುಸ್ತಕವಾಗಿದ್ದು, ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮೂಡಿಸುತ್ತದೆ. ರಜನೀಕಾಂತ್ ಸಹಿ ಇರುವ ಪುಸ್ತಕ ನನಗೆ ತಲುಪಿದ್ದು, ಈ ಶುಭಾಶಯ ನೋಡಿ ಥ್ರಿಲ್ ಆಗಿದೆ. ರಜನೀಕಾಂತ್ ಅವರ ಸರಳತೆ ನನ್ನನ್ನು ಅಕ್ಷರಶಃ ಮೂಕನನ್ನಾಗಿಸಿದೆ. ಈ ಪುಸ್ತಕ ರೂಪದಲ್ಲಿ ಅವರ ಆಶೀರ್ವಾದ ಸಿಕ್ಕಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಸಂತಸ ಹಂಚಿಕೊಂಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ‘ಒಂದಂಕೆ ಕಾಡು’ ಮತ್ತು ‘ಅನಗನಗ ಒಕ ಅಡವಿ’ ತೆರೆ ಕಾಣಲು ಸಜ್ಜಾಗಿದ್ದು, ರಜನೀಕಾಂತ್ ಅವರಿಂದ ಬಂದ ಶುಭಾಶಯ ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ. ‘ಶ್ರೀ ಮಹಾಕಾಳಿ ಪ್ರೊಡಕ್ಷನ್ಸ್’ ನಿರ್ಮಾಣದ ಚೊಚ್ಚಲ ಚಿತ್ರ ಇದಾಗಿದೆ.
ಗಣೇಶ್ ಹೆಗ್ಡೆ ಛಾಯಾಗ್ರಹಣದಲ್ಲಿ ಕರ್ನಾಟಕದ ಪ್ರಕೃತಿ ಸೌಂದರ್ಯ ಅದ್ಭುತವಾಗಿ ಮೂಡಿ ಬಂದಿದೆ. ಶ್ರೀಕಾಂತ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದು, ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯವಿದೆ. ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಿನ್ನೆಲೆ ಗಾಯನ ಚಿತ್ರಕ್ಕಿದೆ