2047ರ ವೇಳೆಗೆ ಸೂಪರ್‌ ಪವರ್‌ – ಸುಳಿವು ಕೊಟ್ಟ ಇಸ್ರೋ ಅಧ್ಯಕ್ಷ

ಭಾರತವು 2047ರ ವೇಳೆಗೆ ಸೂಪರ್ ಪವರ್‌ ಅಗಿ ಬೆಳೆಯಲಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಗತ್ತಿಗೆ ಪೂರೈಕೆದಾರ ರಾಷ್ಟ್ರವಾಗಲಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಪರಸ್ಪರ ಪೂರಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸೋಮನಾಥ್, ನಮ್ಮ ಋಷಿಗಳು ಗಣಿತ, ಖಗೋಳಶಾಸ್ತ್ರ, ಲೋಹಶಾಸ್ತ್ರ, ವಾಸ್ತುಶಿಲ್ಪ ಮತ್ತು ವೈದ್ಯಕೀಯ ವಿಜ್ಞಾನಗಳಲ್ಲಿ ಮಹತ್ವದ ಸಂಶೋಧನೆ ಮಾಡಿದ್ದಾರೆ ಎಂದು ಸ್ಮರಿಸಿದರು. ಆಧ್ಯಾತ್ಮಿಕತೆಯ ಒಳನೋಟಗಳು ಆಧುನಿಕ ವಿಜ್ಞಾನಕ್ಕೆ ಹೊಸ ದಾರಿಗಳನ್ನು ತೆರೆದಿವೆ ಎಂದು ಅವರು ಹೇಳಿದರು.

ಭಾರತದ ಪ್ರಗತಿಯನ್ನು ವಿಶ್ವವು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಅವರು ಹೇಳಿದರು. ದೇಶದ ಯುವಜನತೆ ಈ ಬದಲಾವಣೆಯ ಮುಖ್ಯ ಬಲವಾಗಿದೆ. ಪ್ರಸ್ತುತ ಜನಸಂಖ್ಯೆಯ ಸುಮಾರು 25% ಯುವಕರಾಗಿದ್ದು, ಮುಂದಿನ 25 ವರ್ಷಗಳಿಗೂ ಈ ಸ್ಥಿತಿ ಮುಂದುವರಿಯಲಿದೆ. ಯುವ ಭಾರತವು ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಶಕ್ತಿ ಎಂದು ಅವರು ಬಿಂಬಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಸೋಮನಾಥ್, ಪರಮಾಣು ವಲಯದಲ್ಲಿ ಖಾಸಗಿ ಪಾಲುದಾರರಿಗೆ ಅವಕಾಶ ನೀಡಿರುವ ಸರ್ಕಾರದ ಕ್ರಮವು ಹೊಸ ಅವಕಾಶಗಳನ್ನು ತೆರೆದಿಡುತ್ತದೆ ಎಂದು ಹೇಳಿದರು. ಜೊತೆಗೆ, ಯುವಕರಿಗೆ ಹಸಿರು ತಂತ್ರಜ್ಞಾನ ಮತ್ತು ಇತರ ಹೊಸ ಕ್ಷೇತ್ರಗಳಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author