ತಮಿಳುನಾಡು ವಿರುದ್ಧ ಸುಪ್ರೀಂ ಗರಂ!

ದ್ವಿಭಾಷಾ ಸೂತ್ರವನ್ನು ಮುಂದಿಟ್ಟು ಜವಾಹರ್ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ತಡೆ ನೀಡಿದ್ದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಭಾರತವು ಒಕ್ಕೂಟ ವ್ಯವಸ್ಥೆಯ ರಾಷ್ಟ್ರವಾಗಿದ್ದು, ಪ್ರತಿಕೂಲ ಮನೋಭಾವ ತೊರೆದು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯಗಳ ಮೂಲಕ ತ್ರಿಭಾಷಾ ಸೂತ್ರ ಹಾಗೂ ಹಿಂದಿ ಹೇರಿಕೆ ನಡೆಯಲಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿಗಳಾದ B.V. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠ ವಿಚಾರಣೆ ನಡೆಸಿತು. ಈ ವೇಳೆ, ರಾಜ್ಯ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಆತ್ಮವನ್ನು ಮನಗಾಣಬೇಕು ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ವಿಚಾರಣೆಯ ವೇಳೆ ಪೀಠವು, ಇದನ್ನು ಭಾಷಾ ಸಮಸ್ಯೆಯನ್ನಾಗಿ ಮಾಡಬೇಡಿ. ‘ನಮ್ಮ ರಾಜ್ಯ – ನಮ್ಮ ನೀತಿ’ ಎಂಬ ಮನೋಭಾವ ಸರಿಯಲ್ಲ. ಭಾರತ ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ನೀವು ಒಂದು ಹೆಜ್ಜೆ ಮುಂದೆ ಬಂದರೆ, ಕೇಂದ್ರವೂ ಒಂದು ಹೆಜ್ಜೆ ಮುಂದೆ ಬರುತ್ತದೆ. ಸಕಾರಾತ್ಮಕ ದೃಷ್ಟಿಕೋನವನ್ನ ಅಳವಡಿಸಿಕೊಳ್ಳಿ ಎಂದು ತಮಿಳುನಾಡು ಸರ್ಕಾರಕ್ಕೆ ಕಿವಿಮಾತು ಹೇಳಿತು.

ನವೋದಯ ವಿದ್ಯಾಲಯಗಳನ್ನು ಹಿಂದಿ ಹೇರಿಕೆ ಎಂದು ಪರಿಗಣಿಸಬಾರದು. ಅವು ರಾಜ್ಯದ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಅವಕಾಶ. ತಮಿಳುನಾಡು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದೆ ಎಂದು ನೀವು ಹೇಳಬಹುದು. ಕೇಂದ್ರ ಸರ್ಕಾರ ಅದನ್ನು ಪರಿಶೀಲಿಸುತ್ತದೆ. ಕೇಂದ್ರವು ರಾಜ್ಯದ ಭಾಷಾ ನೀತಿಗೆ ಧಕ್ಕೆಯಾಗುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪೀಠವು ತಿಳಿಸಿದೆ.

ಇದೇ ವೇಳೆ, ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯ ಸ್ಥಾಪನೆಗೆ ಅಗತ್ಯವಿರುವ ಭೂಮಿಯ ಲಭ್ಯತೆ ಕುರಿತು ವಿವರಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ವರದಿ : ಲಾವಣ್ಯ ಅನಿಗೋಳ

About The Author