www.karnatakatv.net: 2021 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.
ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿಆರ್ ಗವಾಯಿ ಅವರನ್ನೊಳಗೊಂಡ ಸುಪ್ರೀಂ ಪೀಠಕ, ಎನ್‌ಟಿಎಗೆ ನೀಟ್ ಫಲಿತಾಂಶ ಪ್ರಕಟಿಸದಂತೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಗಳು ಮತ್ತು ಒಎಂಆರ್ ಶೀಟ್‌ಗಳು ಮಿಶ್ರಣಗೊಂಡ ಇಬ್ಬರು ಆಕಾಂಕ್ಷಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಬಾಂಬೆ ಹೈಕೋರ್ಟ್ ಇತ್ತೀಚಿಗೆ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ದೀಪಾವಳಿ ರಜೆಯ ನಂತರ ಈ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ತೀರ್ಮಾನಿಸುತ್ತೇವೆ. ಅಷ್ಟರಲ್ಲಿ ಈ ಕುರಿತು ಸಂಬoಧಿಸಿದವರಿಗೆ ಪ್ರತಿಕ್ರಿಯಿಸಲು ನೋಟಿಸ್ ಜಾರಿ ಮಾಡುತ್ತೇವೆ. ಈ ಇಬ್ಬರಿಗಾಗಿ ನಾವು 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನಾವು ಹೈಕೋರ್ಟ್ ತೀರ್ಪಿಗೆ ತಡೆ ನೀಡುತ್ತೇವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶವನ್ನು ಪ್ರಕಟಿಸಬಹುದು” ಎಂದು ಎನ್‌ಟಿಎ ಪರವಾಗಿ ವಾದಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಪೀಠ ತಿಳಿಸಿದೆ.