Friday, August 29, 2025

Latest Posts

ಬೀದಿ ನಾಯಿಗಳ ಶೆಲ್ಟರ್ ಹೋಂಗೆ ಸುಪ್ರೀಂ ಬ್ರೇಕ್ – ಬೀದಿ ನಾಯಿಗಳು ಸದ್ಯಕ್ಕೆ ಸೇಫ್!

- Advertisement -

ಬೀದಿ ನಾಯಿಗಳ ನಿರ್ವಹಣೆ ಕುರಿತ ಬಹು ನಿರೀಕ್ಷಿತ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ಶೆಲ್ಟರ್ ಹೋಂಗೆ ಬೀದಿ ನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ. ಈ ನಿರ್ಧಾರದಿಂದ ನಾಯಿ ಪ್ರಿಯರು ಹಾಗೂ ನಾಯಿ ದ್ವೇಷಿಗಳು ಇಬ್ಬರೂ ನಿರಾಳರಾಗಿದ್ದಾರೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.

ಮೊದಲನೆಯದಾಗಿ ತೀರ್ಪಿನ ಮುಖ್ಯಾಂಶಗಳನ್ನ ನೋಡೋದಾದ್ರೆ ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ಕೇಂದ್ರಗಳಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ವ್ಯಾಕ್ಸಿನೇಷನ್ ಮತ್ತು ಸಂತಾನಹರಣ ಚಿಕಿತ್ಸೆ ನಂತರ ನಾಯಿಗಳನ್ನು ಅವುಗಳ ಮೂಲ ಸ್ಥಳಗಳಿಗೆ ಮರುಸ್ಥಳಾಂತರ ಮಾಡಲಾಗುವುದು. ಆಕ್ರಮಣಕಾರಿ ಅಥವಾ ಅನಾರೋಗ್ಯ ಪೀಡಿತ ನಾಯಿಗಳನ್ನು ಮಾತ್ರ ಶೆಲ್ಟರ್‌ ಹೋಂಗಳಲ್ಲೇ ಇರಿಸಲಾಗುವುದು. ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುವಿಕೆ ಸಂಪೂರ್ಣವಾಗಿ ನಿಷಿದ್ಧ, ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ನಾಯಿ ಪ್ರಿಯರು ಬೀದಿ ನಾಯಿಗಳನ್ನು ಶೆಲ್ಟರ್‌ ಹೋಂಗಳಲ್ಲಿ ಬಲವಂತವಾಗಿ ಇಡುವುದನ್ನು ವಿರೋಧಿಸುತ್ತಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಈ ಆಕ್ಷೇಪಣೆಗೆ ಸಕಾರಾತ್ಮಕ ಉತ್ತರ ನೀಡಿದೆ. ಈಗ ಲಸಿಕೆ ಮತ್ತು ನಿಬಂಧನೆಗಳೊಂದಿಗೆ, ನಾಯಿಗಳನ್ನು ಸ್ವಲ್ಪ ನಿಯಂತ್ರಿತ ರೀತಿಯಲ್ಲಿ ಅವರ ಮೂಲ ಪರಿಸರದಲ್ಲೇ ಉಳಿಸಲು ಅವಕಾಶ ನೀಡಲಾಗಿದೆ. ಇದರಿಂದ ನಾಯಿ ಪ್ರಿಯರಿಗೆ ನಿರಾಳತೆ ಒದಗಿದೆ.

ಬೀದಿ ನಾಯಿಗಳಿಂದ ಆತಂಕ ಹೊಂದಿದ್ದ ನಿವಾಸಿಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ತಂದಿದೆ. ಹಿಂಸಾತ್ಮಕ, ರೋಗ ಪೀಡಿತ ನಾಯಿಗಳನ್ನು ಶೆಲ್ಟರ್‌ ಹೋಂಗಳಲ್ಲೇ ಇರಿಸಲು ಅವಕಾಶವಿದೆ. ರೇಬೀಸ್ ಲಕ್ಷಣಗಳು ಕಂಡುಬಂದರೆ, ಆ ನಾಯಿಗಳನ್ನು ಬೀದಿಗೆ ಬಿಡಲಾಗದು. ಆಹಾರ ನೀಡುವ ಸ್ಥಳವೂ ನಿಯಮಿತವಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲ.

ಈ ತೀರ್ಪು ಮೊದಲು ದೆಹಲಿ–ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಸಂಬಂಧಪಟ್ಟಿದ್ದರೂ, ಈಗ ದೇಶಾದ್ಯಂತ ಜಾರಿಗೆ ತರಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಜೊತೆಗೆ, ಈ ಸಂಬಂಧ ಇತರೆ ರಾಜ್ಯಗಳಲ್ಲಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಆದೇಶಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss