www.karnatakatv.net: ಉತ್ತರಪ್ರದೇಶದ ಲಖೀಂಪುರ್ ಹತ್ಯಾಕಾಂಡ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಕಾರ್ಯ ವೈಖರಿ ಬಗ್ಗೆ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ ಈ ಪ್ರಕರಣದ ವಿಚಾರಣೆ ಕುರಿತಾಗಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಛೀಮಾರಿ ಹಾಕಿದೆ. ಈ ಕೇಸ್ ನ ಪ್ರಮುಖ ಆರೋಪಿಯನ್ನು ಬಂಧಿಸೋದಕ್ಕೂ ಮೀನಾ ಮೇಷ ಎಣಿಸ್ತಿದ್ದ ಪೊಲೀಸರ ಮತ್ತೊಂದು ವಿಚಾರಕ್ಕೆ ಸರ್ವೋಚ್ಚನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಅ. 3 ರಂದು ನಡೆದಿದ್ದ ಈ ಘನ ಘೋರ ಪ್ರಕರಣ ಅಷ್ಟು ಭೀಕರವಾಗಿತ್ತು. ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಕಾರು ಚಲಾಯಿಸಿದ್ದ ಕಾರಣ 4 ಮಂದಿ ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ನಡೆದ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ ಐವರು ಮೃತಪಟ್ಟಿದ್ದರು. ಆದರೂ, ಸಹ ಪೊಲೀಸರು ಪ್ರಮುಖ ಆರೋಪಿ ಆಶೀಶ್ ಮಿಶ್ರಾ ವಿರುದ್ಧ ಎಫ್.ಐ.ಆರ್ ದಾಖಲಿಸಿರಲಿಲ್ಲ. ಈ ವೇಳೆ ಸ್ವತಃ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಪೊಲೀಸರಿಗೆ ಸೂಚನೆ ನೀಡಿತ್ತು. ಅಲ್ಲದೆ ಪ್ರಕರಣದ ವಿಚಾರಣೆಗೆ ಮುಂದಾಗಿತ್ತು.
ಇನ್ನು ಈ ಪ್ರಕರಣದ ಹೈಪ್ರೊಫೈಲ್ ಮತ್ತು ಪ್ರಮುಖ ಆರೋಪಿ ಆಶೀಶ್ ಮಿಶ್ರಾ ಬಂಧನ ಕುರಿತಾಗಿಯೂ ಸಾಕಷ್ಟು ತಡ ಮಾಡಿದ್ದ ಪೊಲೀಸರು ಒಂದು ವಾರದ ಬಳಿಕ ಆತನ ಬಂಧಿಸಿದ್ರು. ಇದು ಹಳೇ ವಿಚಾರ ಆದ್ರೆ ಈ ಹತ್ಯಾಕಾಂಡದ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಈ ಪ್ರಕರಣದ ಕುರಿತಾಗಿ ನೀವೇನ್ ಕ್ರಮ ತೆಗೆದುಕೊಂಡಿದ್ದೀರಿ ಅಂತ ಯೋಗಿ ಆದಿತ್ಯನಾಥ್ ಸರ್ಕಾರವನ್ನ ಪ್ರಶ್ನೆ ಮಾಡಿದೆ.
ಅಷ್ಟೇ ಅಲ್ಲ, ಈ ಪ್ರಕರಣದ 164 ಸಾಕ್ಷಿಗಳಲ್ಲಿ ಈವರೆಗೂ 44 ಮಂದಿಯನ್ನು ಮಾತ್ರ ಏಕೆ ವಿಚಾರಣೆ ನಡೆಸಿದಿರ ಅಷ್ಚೇ , ಇನ್ನುಳಿದ ಸಾಕ್ಷಿಗಳ ವಿಚಾರಣೆ ಯಾಕೆ ನಡೆಸಿಲ್ಲ ಇದಕ್ಕೆ ಕಾರಣ ಕೊಡಿ ಅಂತ ಪ್ರಶ್ನಿಸಿದೆ. ಇದಕ್ಕೆ ತಡವರಿಸುತ್ತಲೇ ಉತ್ತರಿಸಿರೋ ಯುಪಿ ಸರ್ಕಾರ, ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಅಂತ ಹೇಳಿದ್ರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ ಅಂತ ಹೇಳಿದೆ.
ಇನ್ನು ಪ್ರಕರಣದ ತನಿಖೆ ನಡೆಸುತ್ತಿರೋ ಉತ್ತರ ಪ್ರದೇಶ ಪೊಲೀಸರಿಗೂ ಸುಪ್ರೀಂ ಕೋರ್ಟ್ ಬೆವರಿಳಿಸಿದೆ. ಯಾಕಂದ್ರೆ ಈ ಹಿಂಸಾಚಾರ ಪ್ರಕರಣದ ವಿಚಾರಣೆ ಇದೆ ಅಂತ ತಿಳಿದಿದ್ರೂ ಪೊಲೀಸರು ನಿನ್ನೆ ತಡರಾತ್ರಿ 1 ಗಂಟೆ ವೇಳೆಗೆ ಸುಪ್ರೀಂಕೋರ್ಟ್ ಗೆ ಒದಗಿಸಿದೆ. ಕೊನೆಯ ನಿಮಿಷದಲ್ಲಿ ವರದಿ ಸಲ್ಲಿಸಿದ್ರೆ ನಾವು ಅದನ್ನು ಓದುವುದಾದ್ರೂ ಹೇಗೆ, ಕನಿಷ್ಟ ಒಂದು ದಿನ ಮೊದಲು ಫೈಲ್ ಮಾಡಬೇಕಿತ್ತು ಅಂತ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಛೀಮಾರಿ ಹಾಕಿದೆ. ಇನ್ನು ಇವತ್ತು ನಡೆದ ಈ ಪ್ರಕರಣದ ವಿಚಾರಣೆಯನ್ನು ಮತ್ತೆ ಅಕ್ಟೋಬರ್ 26ನೇ ತಾರೀಖಿಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಒಟ್ಟಾರೆ ಲಖಿಂಪುರ್ ಖೇರಿಯ ಈ ಹಿಂಸಾಚಾರ ಪ್ರಕರಣದ ತನಿಖೆ ವಿಚಾರದಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಯಾಕಿಷ್ಟು ಹಿಂದೇಟು ಹಾಕ್ತಿದ್ದಾರೆ ಅನ್ನೋದು ಗೊತ್ತಾಗ್ತಿಲ್ಲ. ಆದ್ರೆ ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸೋ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯ ಸರಿಯಾಗಿಯೇ ಚಾಟಿ ಬೀಸ್ತಿದೆ.
ಬ್ಯೂರೋ ರಿಪೋರ್ಟ್, ಕರ್ನಾಟಕ ಟಿವಿ