ಕರ್ನಾಟಕ ರಾಜಕೀಯದಲ್ಲಿ ಪವರ್‌ಶೇರಿಂಗ್ ಪೈಪೋಟಿ ಮತ್ತೆ ತೀವ್ರಗೊಂಡಿದೆ. ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು, ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ರಾಜಕೀಯ ಚರ್ಚೆ ಈಗ ಕಾವೇರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪವರ್ ಶೇರಿಂಗ್ ಮಾತು ಕೇಳಿ ಬಂದಿದ್ದರೂ, ಇದೀಗ ‘ಕೊಟ್ಟ ಮಾತು’ ವಿಷಯ ಮತ್ತೆ ಕೇಂದ್ರಬಿಂದುವಾಗಿದೆ.
ಈ ಮಧ್ಯೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಮಾರ್ಮಿಕ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ, ಅವರು ಮಾಡಿದ್ದ ಒಪ್ಪಂದದಂತೆ ನಡೆದುಕೊಳ್ಳುತ್ತಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಹಿಂದಿನ ಸರ್ಕಾರದಲ್ಲೂ ಕೊಟ್ಟ ಮಾತಿನಂತೆ ನಡೆದುಕೊಂಡರು, ಈಗಲೂ ಹಾಗೆಯೇ. ಅದೃಷ್ಟ ಇದ್ದರೆ ನನ್ನಣ್ಣ(ಡಿಕೆಶಿ) ಸಿಎಂ ಆಗ್ತಾರೆ ಎಂದು ನೇರವಾಗಿ ಹೇಳಿ ರಾಜಕೀಯ ಕುತೂಹಲ ಹೆಚ್ಚಿಸಿದ್ದಾರೆ.
ನಾನು ಎಲ್ಲಕ್ಕೂ ಸಾಕ್ಷಿ, ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು ಎಂದು ಹೇಳಿ ಮತ್ತಷ್ಟು ರಹಸ್ಯತೆಯನ್ನು ಉಳಿಸಿದ ಡಿಕೆ ಸುರೇಶ್, ಎಲ್ಲರ ಆಸೆಯೂ ಡಿಕೆಶಿ ಸಿಎಂ ಆಗಲಿ ಎಂಬುದೇ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ನವೆಂಬರ್ ಕ್ರಾಂತಿ? ನಾಯಕತ್ವ ಬದಲಾವಣೆ? ಎನ್ನುವ ಪ್ರಶ್ನೆಗಳು ಮತ್ತೊಮ್ಮೆ ತಲೆಯೆತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

