ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ವಿರುದ್ಧ ಪ್ರತಿಪಾದನೆ ಮಾಡಿದ ಕೆಲವೇ ದಿನಗಳ ಬಳಿಕ, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಆರ್‌ಎಸ್‌ಎಸ್ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 13 ರಂದು ನೀಡಿದ ಈ ಪತ್ರದಲ್ಲಿ, ಸಚಿವ ಖರ್ಗೆ ಅವರು ಕರ್ನಾಟಕ ನಾಗರಿಕ ಸೇವಾ ನಡವಳಿಕೆ ನಿಯಮಗಳನ್ನು ಉಲ್ಲೇಖಿಸಿದ್ದು, ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಅನುದಾನಿತ ಸಂಸ್ಥೆಗಳ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
ಕರ್ನಾಟಕ ಸ್ಟೇಟ್ ಸಿವಿಲ್ ಕಾಂಟ್ರಾಕ್ಟ್ ರೂಲ್ಸ್ 2021ಇದೆ. ಇದನ್ನ ಇದನ್ನ ಪಾಲನೆ ಮಾಡಿ ಅಂತ ಹೇಳುತ್ತಿದ್ದೆವೆ. ಕೆಲವೊಬ್ಬರು ಇದನ್ನ ಮೀರಿ RSS ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಭಾಷಣ ಮಾಡಿದ್ದಾರೆ. ಹಾಗಾಗಿ ಕಾನೂನಾತ್ಮಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತೇವೆ.
ನಮ್ಮ ಇಲಾಖೆಯ PDO ಗಳೇ ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಅನ್ನೋ ಸುದ್ದಿ ಬಂದಿತ್ತು. ರಿಪೋರ್ಟ್ ತರಿಸಿದ್ದೇನೆ. ರಿಪೋರ್ಟ್ ಕೂಡ ಬಂದಿದೆ. ನಿಯಮಕ್ಕೆ ಅನುಗುಣವಾಗಿ ಅವರನ್ನ ಸಸ್ಪೆಂಡ್ ಮಾಡ್ತೀವಿ. ಯಾವುದೇ ಇಲಾಖೆಯಲ್ಲಿ ಸರ್ಕಾರದ ಅಧಿಕಾರವನ್ನ ದುರ್ಬಳಿಕೆ ಮಾಡುತ್ತಿದ್ದಾರೋ, ಬೇರೆಯವರನ್ನ ಇಂಪ್ಲ್ಯೂಯನ್ಸ್ ಮಾಡುತ್ತಿದ್ದರೋ ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಕ್ಯಾಬಿನೆಟ್ ನಲ್ಲಿ ಆಗ್ರಹಿಸುತ್ತೇನೆ ಎಂದರು.
ವರದಿ : ಲಾವಣ್ಯ ಅನಿಗೋಳ