ಸ್ವಾಮಿಯೇ ಶರಣಂ ಅಯ್ಯಪ್ಪ: ಭಕ್ತರ ಮಹಾಸಂಗಮ!

ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ದೇಶಾದ್ಯಂತ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿವೆ. ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು ಮಣಿಕಂಠನ ದರ್ಶನಕ್ಕೆ ತೆರಳುವ ದೃಶ್ಯವೇ ಒಂದು ಹಬ್ಬದಂತೆ ಕಂಗೊಳಿಸುತ್ತಿದೆ. ಮಕರ ಸಂಕ್ರಾಂತಿಯಂದು ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟಿ ಕೋಟಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಈ ಬಾರಿಯೂ ಕೂಡ ಆ ಪವಿತ್ರ ಕ್ಷಣಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಮಕರ ಜ್ಯೋತಿ ದರ್ಶನಕ್ಕಾಗಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಸಾಗರೋಪಾದಿಯಲ್ಲಿ ಭಕ್ತರು ಇನ್ನೂ ಆಗಮಿಸುತ್ತಲೇ ಇದ್ದಾರೆ. ಇನ್ನು ಮಕರಜ್ಯೋತಿಯು ಬುಧವಾರ ದರ್ಶನವಾಗಲಿದೆ. ಈ ಬಾರಿ ಸಂಕ್ರಾಂತಿಯು 14ರ ಮಧ್ಯಾಹ್ನದಿಂದಲೇ ಆರಂಭವಾಗುವ ಕಾರಣ 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

ಭಕ್ತರ ಅನುಕೂಲಕ್ಕಾಗಿ ಸುಮಾರು 1,000 ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಮಕರ ಸಂಕ್ರಾಂತಿಯಂದು ಅಯ್ಯಪ್ಪನ ಭಕ್ತರ ವ್ರತಾಂತ್ಯವಾಗುತ್ತಿದ್ದು, ಸಂಜೆ ನಂತರ ಆಕಾಶದಲ್ಲಿ ಜ್ಯೋತಿ ರೂಪದಲ್ಲಿ ಅಯ್ಯಪ್ಪ ದರ್ಶನ ನೀಡುತ್ತಾನೆ, ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ಗಾಢ ನಂಬಿಕೆ ಇದೆ. ಇದೇ ಕಾರಣಕ್ಕೆ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಸಮಾಗಮಿಸುತ್ತಿದ್ದಾರೆ.

ಮಕರ ಸಂಕ್ರಾಂತಿ ಎಂದರೆ ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಅತ್ಯಂತ ಪವಿತ್ರ ದಿನ. ದೇಶದ ಮೂಲೆಮೂಲೆಯಿಂದ ಭಕ್ತರು ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಸೇರಿ, ಜ್ಯೋತಿ ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪನನ್ನು ಕಂಡು ಪುನೀತರಾಗುತ್ತಾರೆ. ಈ ಹಿನ್ನೆಲೆ ಶಬರಿಮಲೆಯತ್ತ ಭಕ್ತರ ಅಪಾರ ಪ್ರವಾಹ ಮುಂದುವರಿದಿದ್ದು, ವಿಶೇಷ ಸಾರಿಗೆ ವ್ಯವಸ್ಥೆ, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author