ಬೆಂಗಳೂರು : ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ವಿರುದ್ಧ ಪದೇ ಪದೇ ಕೆಂಡ ಕಾರುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಈ ಮಣ್ಣನ್ನು ಯಾರೂ ನಿಯಂತ್ರಿಸಲಾಗದು ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಚೆನೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರಾಜ್ಯಗಳ ಹಕ್ಕುಗಳು ಹಾಗೂ ಸ್ವಾಯತ್ತತೆಯ ಮೇಲಿನ ದಾಳಿಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಇನ್ನೂ ಚುನಾವಣೆಗೆ ಹಲವು ತಿಂಗಳುಗಳು ಬಾಕಿ ಉಳಿದಿರುವಾಗಲೇ ತನ್ನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ಹೆದರಿಸುತ್ತಿರುವುದು ಹೊಸದೇನಲ್ಲ. ಆದರೆ ಇಂಥವುಗಳಿಗೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ತಮಿಳುನಾಡು ಯಾವುದೇ ಕಾರಣಕ್ಕೂ ದೆಹಲಿ ಆಡಳಿತದ ನಿಯಂತ್ರಣಕ್ಕೆ ಒಳಪಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೆ ಮುಂಬರುವ 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಗೆಲುವಾಗುವುದು ನಿಶ್ಚಿತವಾಗಿದೆ. ತಮಿಳುನಾಡು ಕೇವಲ ಒಂದು ರಾಜ್ಯದ ಹಿತಕ್ಕಾಗಿ ಹೋರಾಡುತ್ತಿಲ್ಲ, ಬದಲಿಗೆ ಎಲ್ಲ ರಾಜ್ಯಗಳ ಪರವಾಗಿ ಧ್ವನಿ ಎತ್ತಿದೆ. ಕೇವಲ ರಾಜ್ಯದ ಜನರಷ್ಟೇ ಅಲ್ಲದೆ ಎಲ್ಲರೂ ಡಿಎಂಕೆಯ ಶಕ್ತಿಯಾಗಿದ್ದಾರೆ ಎಂದು ಸ್ಟಾಲಿನ್ ಗುಡುಗಿದ್ದಾರೆ.
ವಿಭಜನೆಯ ಕುಂತಂತ್ರ ನಡೆಯಲ್ಲ..!
ಅಲ್ಲದೆ ರಾಜಕೀಯ ಪಕ್ಷಗಳನ್ನು ವಿಭಜಿಸುವ ಬಿಜೆಪಿಯ ಕುಂತಂತ್ರ ತಮಿಳುನಾಡಿನಲ್ಲಿ ಯಾವತ್ತೂ ಸಫಲವಾಗುವುದಿಲ್ಲ. ಇಲ್ಲಿ ಕೆಲವರನ್ನು ಬೆದರಿಸುವ ಮೂಲಕ ಮತ್ತು ಮೈತ್ರಿ ಮಾಡಿಕೊಂಡು ನೀವು ಗೆಲ್ಲಬಹುದು ಎಂದು ನೀವು ನಂಬುತ್ತೀರಾ? ನಿಮ್ಮ ಎಲ್ಲಾ ಮಿತ್ರರನ್ನು ಕರೆತನ್ನಿ, ನಾವು ಹೋರಾಟಕ್ಕೆ ಸಿದ್ಧರಿದ್ದೇವೆ… ಅಮಿತ್ ಶಾ ಅಲ್ಲ – ಬೇರೆ ಯಾವುದೇ ಶಾ ಇಲ್ಲಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ. ಇದು ತಮಿಳುನಾಡು. ಮುತ್ತುವೇಲ್, ಕರುಣಾನಿಧಿ ಸ್ಟಾಲಿನ್ ಇರುವವರೆಗೆ, ನಿಮ್ಮ ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ವಿಪಕ್ಷಗಳು ರಾಜ್ಯದ ಹಿತಕ್ಕೆ ವಿರುದ್ಧವಾಗಿವೆ..
ರಾಜ್ಯದಲ್ಲಿ ಹಲವು ಜನಪರ ಕಾರ್ಯಕ್ರಮ ಹಾಗೂ ಅಭಿವೃದ್ದಿ ಯೋಜನೆಗಳ ಜಾರಿಯಿಂದಲೇ ಜನರಿಗೆ ಡಿಎಂಕೆ ಆಡಳಿತದಲ್ಲಿ ಆತ್ಮವಿಶ್ವಾಸ ಮೂಡಿದೆ. ಅಭಿವೃದ್ದಿಯಾಗಿರುವ ರಾಜ್ಯವನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಸರ್ಕಾರದ ಬಗ್ಗೆ ಯಾವುದೇ ವಿಷಯಗಳು ಸಿಗಲಿಲ್ಲ ಹೀಗಾಗಿ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಆಡಳಿತ ಅಥವಾ ಯಾವುದೇ ಇತರ ವಿಚಾರಗಳಿರಲಿ, ರಾಜ್ಯವು ಉತ್ತಮ ಪ್ರದರ್ಶನ ನೀಡಿದೆ. ಆದಾಗ್ಯೂ, ಕೆಲವು ವಿರೋಧ ಪಕ್ಷಗಳು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಬದಲು, ತಮಿಳುನಾಡಿಗೆ ವಿರುದ್ಧವಾದ ಪಕ್ಷಗಳಂತೆ ವರ್ತಿಸುತ್ತಿವೆ ಎಂದು ಹರಿಹಾಯ್ದಿದ್ದಾರೆ.
ಎಐಎಡಿಎಂಕೆ ತಮಿಳುನಾಡನ್ನು ಒತ್ತೆ ಇಡಲು ಹೊರಟಿದೆ..
ಅಲ್ಲದೆ ಬಿಜೆಪಿ ಡಿಎಂಕೆ ಮೈತ್ರಿ ಪ್ರಸ್ತಾಪಿಸಿ, ಅವರ ಐಡಿಯಾ ಏನು? ಅವರು ತಮಿಳುನಾಡಿಗೆ ಮತ್ತು ತಮಿಳು ಜನರಿಗೆ ದ್ರೋಹ ಮಾಡುವ ತಂಡದೊಂದಿಗೆ ಸಹವಾಸ ಮಾಡುವ ಮೂಲಕ ತಮಿಳುನಾಡನ್ನು ಒತ್ತೆ ಇಡಲು ಹೊರಟಿದ್ದಾರೆ, ಇದು ಆ ಅವಕಾಶವಾದಿಗಳ ಏಕೈಕ ಆಲೋಚನೆಯಾಗಿದೆ ಎಂದು ಬಿಜೆಪಿ ಮತ್ತು ಎಐಎಡಿಎಂಕೆಯನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ಸ್ಟಾಲಿನ್ ಟೀಕಿಸಿದ್ದಾರೆ. ನೀಟ್, ತ್ರಿಭಾಷಾ ನೀತಿ, ವಕ್ಫ್ ತಿದ್ದುಪಡಿ ಮತ್ತು ಗಡಿನಿರ್ಣಯಕ್ಕಾಗಿ ರಾಜ್ಯಗಳನ್ನು ಸಜ್ಜುಗೊಳಿಸುವುದನ್ನು ವಿರೋಧಿಸಿಸುವ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದೃಢವಾಗಿ ನಿಂತಿದ್ದು ಡಿಎಂಕೆ ಎಂದು ಎಂ.ಕೆ. ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ಅಲ್ಲದೆ ಕೇಂದ್ರ ಗೃಹ ಸಚಿವರು ಇಲ್ಲಿಗೆ ಬಂದಾಗ ನಮ್ಮ ಸರ್ಕಾರದ ಬಗ್ಗೆ ಆರೋಪಿಸಿದ್ದರು. ಆದರೆ ನಾವು ಇಷ್ಟೆಲ್ಲಾ ಮಾಡಿದ್ದು ಜನರ ಬೇರೆಡೆ ಸೆಳೆಯಲು ಅಲ್ಲ ಎಂದು ಅಮಿತ್ ಶಾ ವಿರುದ್ಧ ನೇರವಾಗಿ ತಮಿಳುನಾಡು ಸಿಎಂ ಟೀಕಾ ಪ್ರಹಾರ ನಡೆಸಿದ್ದಾರೆ.
ಅಮಿತ್ ಶಾ ಹೇಳಿದ್ದೇನು ..?
ಇನ್ನೂ ಇತ್ತೀಚಿಗಷ್ಟೇ ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಎಂಕೆ ಸರ್ಕಾರದ ವಿರುದ್ಧ ಹಗರಣಗಳ ಆರೋಪ ಮಾಡಿದ್ದರು. ಅಲ್ಲದೆ ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆಯ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನೋಡಿಕೊಂಡೇ ಜನರು ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು 39,000 ಕೋಟಿ ರೂಪಾಯಿಗಳ ಮದ್ಯ ಹಗರಣ, ಮರಳು ಗಣಿಗಾರಿಕೆ ಹಗರಣ, ಇಂಧನ ಹಗರಣ, ಎಲ್‌ಸಿಒಟಿ ಹಗರಣ, ಸಾರಿಗೆ ಹಗರಣ, ಹಣ ವರ್ಗಾವಣೆ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ತೊಡಗಿಕೊಂಡಿದೆ. ಈ ಎಲ್ಲವುಗಳ ಕುರಿತು ತಮಿಳುನಾಡಿನ ಜನರು ಉದಯನಿಧಿ ಮತ್ತು ಸ್ಟಾಲಿನ್ ಅವರಿಂದ ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.