ಚೆನ್ನೈ: 53 ಮಂದಿಯನ್ನು ಬಲಿಪಡೆದ ತಮಿಳುನಾಡಿನ ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತಕ್ಕೆ ಬಿಜೆಪಿಯೇ ಹೊಣೆ ಎಂದು ಡಿಎಂಕೆ ಆರೋಪಿಸಿದೆ.ಅಕ್ರಮ ಮದ್ಯವನ್ನು ಉತ್ಪಾದಿಸಲು ಬಳಸಿದ ಮೆಥೆನಾಲ್ ಅನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟದ ಆಡಳಿತವಿರುವ ರಾಜ್ಯ ಪುದುಚೇರಿಯಿಂದ ಪಡೆಯಲಾಗಿದೆ. ಈ ಘಟನೆ ಅಣ್ಣಾಮಲೈ ಅವರ ಪೂರ್ವಯೋಜಿತ ಪಿತೂರಿ ಎಂದು ಡಿಎಂಕೆ ನಾಯಕರೊಬ್ಬರು ಆರೋಪಿಸಿದ್ದಾರೆ.
ಇದಕ್ಕೂ ಮುನ್ನ ಮದ್ಯ ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಣ್ಣಾಮಲೈ, ಪ್ರಸ್ತುತ ನಡೆದ ಘಟನೆಯನ್ನು ನೋಡಿದಾಗ ಎಂಕೆ ಸ್ಟಾಲಿನ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಡಿಎಂಕೆ ಸಂಘಟನಾ ಕಾರ್ಯದರ್ಶಿಯಾದ ಆರ್‌ಎಸ್ ಭಾರತಿ, “ರಾಜೀನಾಮೆ ನೀಡಬೇಕಾಗಿರುವುದು ಅವರ ಸಚಿವರು ಮತ್ತು ಪುದುಚೇರಿಯ ಮುಖ್ಯಮಂತ್ರಿಗಳು. ಯಾಕೆಂದರೆ ಕಳ್ಳಭಟ್ಟಿ ತಯಾರಿಸಲು ಕಚ್ಚಾ ಸಾಮಗ್ರಿಗಳನ್ನು ಪುದುಚೇರಿಯಿಂದ ತರಲಾಗಿದೆ ಎಂದು ಪೊಲೀಸರು ನಮಗೆ ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ. “ಈ ಸಂಪೂರ್ಣ ಘಟನೆಗೆ ಬಿಜೆಪಿಯೇ ಹೊಣೆ. ಅವರೇ ಇದನ್ನು ಮಾಡಿಸಿರುವುದು. ಇದು ಅಣ್ಣಾಮಲೈ ಅವರ ಯೋಜಿತ ಷಡ್ಯಂತ್ರ ಎಂದು ನಾವು ಹೇಳುತ್ತೇವೆ. ಇದು ವಿಕ್ರವಾಂಡಿ ಚುನಾವಣೆಗೆ ಸಂಬಂಧಿಸಿದೆ. ಚುನಾವಣೆಗೂ ಮುನ್ನ ಇದನ್ನು ಮಾಡುತ್ತಿದ್ದಾರೆ ಎಂಬ ಅನುಮಾನವಿದೆ” ಎಂದು ಸಂದೇಹ ವ್ಯಕ್ತಪಡಿಸಿದರು.
ಜೂನ್ 18ರಂದು ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 53 ಜನರು ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿತ್ತು. ಇದೀಗ ಈ ವಿಚಾರ ಪರಸ್ಪರ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.