ಈ ಹೋಟೆಲ್ಗೆ ಯಾವ್ದೇ ನೇಮ್ ಬೋರ್ಡೇ ಇಲ್ಲ, ಆದ್ರೂ ಜನ ಪ್ರೀತಿಯಿಂದ “ಮುದ್ದಣ್ಣ ಹೋಟೆಲ್” ಅಂತ ಕರೀತಾರೆ. ಸುಮಾರು ಕಡೆ ದುಡ್ಡು ಜಾಸ್ತಿ ತಗೊಂಡು ಕಡಿಮೆ ಊಟ ಕೊಡೋ ಹೋಟೆಲ್ಗಳಿವೆ, ಜೊತೇಲಿ ಟೇಸ್ಟೂ ಕೂಡ ಅಷ್ಟಕ್ಕಷ್ಟೇನೇ ಇರುತ್ತೆ. ಈ ಮಧ್ಯೆ ನಿಮಗೆ ಅತೀ ಕಡಿಮೆ ಬೆಲೆಗೆ ಮನೆಯಲ್ಲೇ ತಯಾರಿಸಿ, ಮನೆಯೂಟದ ರುಚಿಯೇ ಕೊಡೋ ಹೋಟೆಲ್ ಒಂದರ ಬಗ್ಗೆ ಹೇಳ್ತೀವಿ ನೋಡಿ.
ಈ ಹೋಟೆಲ್ ಇರೋದು ಬೆಂಗಳೂರಿನ ಎಸ್,ಪಿ ರೋಡ್ ಬಳಿ, ಶಾರದಾ ಥಿಯೇಟರ್ನ ಮುಂಭಾಗದ ರಸ್ತೆಯಲ್ಲಿ. ಈ ಹೋಟೆಲ್ಗೆ 74 ವರ್ಷದ ಇತಿಹಾಸವಿದೆ. ಇದು ನೋಡೋಕೆ ಐಷಾರಾಮಿ ಹೋಟೆಲ್ ಅಲ್ಲ, ಆದರೂ ಜನ ಜೇನು ನೊಣದ ತರಹ ಇಲ್ಲಿ ಊಟಕ್ಕಾಗಿ ಕ್ಯೂ ನಿಲ್ತಾರೆ. ಇದಕ್ಕೆ ಒಂದೇ ಕಾರಣ, ಇಲ್ಲಿ ಸಿಗೋ ಪುಲಾವ್ ಥೇಟ್ ಬಿರಿಯಾನಿ ಟೇಸ್ಟ್ ಕೊಡುತ್ತೆ. ಮೊದಲು ಈ ಜಾಗ ಪ್ರಸನ್ನ ಗಂಗಾಧರ ಸ್ವಾಮಿ ದೇವಸ್ಥಾನವಾಗಿತ್ತು, ಇದನ್ನ ಅಂಗಡಿ ಮಾಡಿ ದೇವಸ್ಥಾನಕ್ಕೆ ಆದಾಯ ಸಿಗಲು ಈ ಹೋಟೆಲ್ ತೆರೆದಿದ್ದಾರೆ ಹೀಗಂತ ಹೋಟೆಲ್ ಮಾಲೀಕರು ಕರ್ನಾಟಕ ಟಿವಿ ಜೊತೆ ಮಾತಾಡಿದ್ದಾರೆ.
ಪುಲಾವ್, ಚಿತ್ರಾನ್ನ, ಇಡ್ಲಿ. ಕಾರಾಬಾತ್ , ಮೊಸರನ್ನ ಇಲ್ಲಿ ಸಿಗುತ್ತೆ. ವಿಶೇಷ ಅಂದ್ರೆ ಈ ಉಪಹಾರಗಳಿಗೆ ತ್ರಿಮೂರ್ತಿ, ಚತುರ್ಮುಖ, ಪಂಚಮುಖಿ, ಶಂಕರ್-ಗುರು ಎಂಬ ಹೆಸರುಗಳನ್ನಿಟ್ಟಿದ್ದಾರೆ. ನಾಲ್ಕಾಣಿಗೆ ಅವತ್ತಿಗೆ ಶುರುವಾದ ಇವರ ಜರ್ನಿ 30ರೂ ಗೆ ಇವತ್ತು ಜನ ಹೊಟ್ಟೆ ತುಂಬ ಊಟ ಮಾಡಿ ಹೋಗ್ತಾರೆ. ಇಲ್ಲಿ ಊಟ ಮಾಡೋ ಗ್ರಾಹಕರೂ ಸಹ ಈ ಹೋಟೆಲ್ ಶುರುವಾದಾಗಿನಿಂದ ಈಗಲೂ ಬರುವವರಿದ್ದಾರೆ, ಕೆಲವರು ದೂರದಿಂದ ಈ ಮುದ್ದಣ್ಣ ಹೋಟೆಲ್ನ ಊಟಕ್ಕಾಗಿ ಬರುವವರೂ ಇದ್ದಾರೆ.
ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ನ್ಯೂಸ್