ಶೃಂಗೇರಿ ಮರು ಮತ ಎಣಿಕೆ ಕೇಸ್ – ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರಿಗೆ ಸುಪ್ರೀಂ ಕೋರ್ಟ್ ರಿಲೀಫ್!

ಕರ್ನಾಟಕ ರಾಜಕೀಯದಲ್ಲಿ ಸಖತ್ ಸೌಂಡ್ ಮಾಡ್ತಿರೋ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ ಕಡೆಯಿಂದ ಮತ್ತೊಮ್ಮೆ ದೊಡ್ಡ ರಿಲೀಫ್ ಸಿಕ್ಕಿದೆ! ಹೌದು, ರಾಜೇಗೌಡರ ಶಾಸಕ ಸ್ಥಾನವನ್ನು ಮುಂದುವರಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ವಿಸ್ತರಣೆ ಮಾಡಿದೆ.

ವಿಷಯ ಏನು ಅಂದ್ರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದ್ರೆ, ಚುನಾವಣೆಯಲ್ಲಿ ಅಂಚೆ ಮತಗಳ ಎಣಿಕೆ ವಿಚಾರವಾಗಿ ಜೀವರಾಜ್ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಕೆಲವು ಅಂಚೆ ಮತಗಳು ಅಸಿಂಧುವಾಗಿದ್ದವು. ಇದರಿಂದಾಗಿ ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದರು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದವು.

ಈ ಬೆಳವಣಿಗೆಯನ್ನು ಪ್ರಶ್ನಿಸಿ ಶಾಸಕ ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಮುಂದಿನ ವಿಚಾರಣೆವರೆಗೂ ರಾಜೇಗೌಡ ಅವರ ಶಾಸಕ ಸ್ಥಾನಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.

ಸದ್ಯಕ್ಕಂತೂ ರಾಜೇಗೌಡರಿಗೆ ದೊಡ್ಡ ನಿರಾಳ ಸಿಕ್ಕಿದ್ದು, ಸೆಪ್ಟೆಂಬರ್ 10ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಮುಂದಿನ ವಿಚಾರಣೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಮತ್ತು ಅಂತಿಮ ತೀರ್ಪು ಯಾರ ಪರವಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author