www.karnatakatv.net: ರಾಯಚೂರಿನ ಈ ಒಂದು ಕುಗ್ರಾಮದಲ್ಲಿ ಶಾಲೆ ಇದ್ರೂ ಅದು ಕುರಿ ಕೊಟ್ಟಿಗೆ ಪರಿಸ್ಥಿಗೆ ತಲುಪಿತ್ತು. ಇನ್ನು ಈ ಗ್ರಾಮದಲ್ಲಿ ಪಾಠ ಕೇಳೋದಕ್ಕೆ ವಿದ್ಯಾರ್ಥಿಗಳಿದ್ರೂ ಶಿಕ್ಷಕರು ಮಾತ್ರ ಇರಲಿಲ್ಲ. ಇದ್ದೊಬ್ಬ ಶಿಕ್ಷಕಿ ಕೂಡ ಈ ಶಾಲೆಗೆ ಬರೋದನ್ನ ತಪ್ಪಿಸೋದಕ್ಕೆ ಬೇರೆ ಶಾಲೆಗೆ ಎರವಲು ಸೇವೆಗೆ ಹೋಗಿದ್ರು. ಎರವಲು ಸೇವೆ ಮುಗಿದ ಬಳಿಕವೂ ಶಿಕ್ಷಕಿ ಮತ್ತೆ ಈ ಶಾಲೆಗೆ ಬರೋದಕ್ಕೆ ಮನಸು ಮಾಡಲಿಲ್ಲ. ಇದರಿಂದ ಈ ಗ್ರಾಮದ ಮಕ್ಕಳು ಶಿಕ್ಷಣ ವಂಚಿತರಾಗ್ತಿದ್ರು. ಆದ್ರೆ ಈ ಬಗ್ಗೆ ಕರ್ನಾಟಕ ಟಿವಿ ವರದಿ ಪ್ರಸಾರ ಮಾಡಿದ ಬಳಿಕ ಈ ಶಾಲೆಯ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಹೌದು, ಇದು ಕರ್ನಾಟಕ ಟಿವಿ ವರದಿಯ ಫಲಶ್ರುತಿ. ರಾಯಚೂರಿನ ಅಮರಾವತಿ ಪೋತಗಲ್ ಅನ್ನೋ ಪುಟ್ಟ ಗ್ರಾಮದಲ್ಲಿ ಮಕ್ಕಳು ಶಾಲೆಯತ್ತ ಮುಖ ಮಾಡಿದ್ರು ಮತ್ತೆ ವಾಪಸ್ ಬರ್ತಿದ್ರು. ಯಾಕಂದ್ರೆ ಈ ಶಾಲೆಯಲ್ಲಿ ಪಾಠ ಮಾಡೋಕೆ ಟೀಚರ್ ಗಳೇ ಇರಲಿಲ್ಲ. ಇನ್ನು ಮಕ್ಕಳು ಹೀಗೆ ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗ್ತಿರೋದನ್ನ ಕಂಡು ಪೋಷಕರು ಕೊರಗುತ್ತಿದ್ರು. ಹಿಂಗೇ ಆದ್ರೆ ನಮ್ಮ ಮಕ್ಕಳ ಭವಿಷ್ಯದ ಗತಿಯೇನಪ್ಪಾ ಅಂತ ಚಿಂತೆ ಮಾಡ್ತಿದ್ರು.
ಈ ಬಗ್ಗೆ ಇದೇ ತಿಂಗಳ 16ನೇ ತಾರೀಖು ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇನ್ನು ಈ ಶಾಲೆಯ ದುಸ್ಥಿತಿ ಬಗ್ಗೆ ಮಾಡಿದ್ದ ವರದಿ ಅಧಿಕಾರಿಗಳ ಕಣ್ಣು ತೆರೆಸಿತು. ಹೀಗಾಗಿ ಅಧಿಕಾರಿಗಳು ಯರವಲು ಸೇವೆಗೆಂದು ಹೋಗಿದ್ದ ಶಿಕ್ಷಕರನ್ನು ಮರಳಿ ಮಾತೃ ಶಾಲೆಗೆ ಮರಳುವಂತೆ ಮಾಡಿದ್ದಾರೆ. ಇನ್ನು ಈ ಶಾಲೆಯ ದುಸ್ಥಿತಿ ಬಗ್ಗೆಯೂ ಕೂಡ ವರದಿ ಮಾಡಿದ್ದನ್ನ ನೋಡಿದ ನಗರ ಸಭಾ ಸದಸ್ಯ ಸಣ್ಣ ನರಸ ರೆಡ್ಡಿ ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ಆವರಣ ಸ್ವಚ್ಛತೆ ಮಾಡಿಸಿದ್ದಾರೆ. ಇದರಿಂದಾಗಿ ಹಾಳು ಕೊಂಪೆಯoತಾಗಿ ಪಾಳು ಬಿದ್ದ ಶಾಲೆಗೆ ಹೊಸ ಚೈತನ್ಯ ತುಂಬಿದoತಾಗಿ ಇದೀಗ ಮಕ್ಕಳು ಶಾಲೆಗಳಲ್ಲಿ ಪಾಠ ಕೇಳುವಂತಾಗಿದೆ.
ಒಟ್ಟಾರೆ, ಇಷ್ಟೂ ದಿನ ಶಿಕ್ಷಣ ವಂಚಿತರಾಗಿದ್ದ ಮಕ್ಕಳು ಶಾಲೆಗೆ ತೆರಳಿ ಪಾಠ ಕೇಳುವಂತಾಗಿದೆ. ಇದಕ್ಕೆ ಗ್ರಾಮಸ್ಥರೂ ಹಾಗೂ ವಿದ್ಯಾರ್ಥಿಗಳು ಕರ್ನಾಟಕ ಟಿವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದೇನೇ ಇರಲಿ ಶಿಕ್ಷಣ ಇಲಾಖೆ ರಾಜ್ಯದ ಇಂತಹ ಶಾಲೆಗಳತ್ತ ಗಮನಹರಿಸಿ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಿದೆ.
ಅನಿಲ್ ಕುಮಾರ್- ಕರ್ನಾಟಕ ಟಿವಿ- ರಾಯಚೂರು