Monday, November 17, 2025

Latest Posts

ಜಾತಿಗಣತಿಗೆ ತಾಂತ್ರಿಕ ದೋಷ CM ತವರಲ್ಲೇ ಕಳಪೆ ಸಾಧನೆ!

- Advertisement -

ಮೈಸೂರಿನಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿತು. ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಮೀಕ್ಷೆ ಆರಂಭವಾದರೂ, ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗುತ್ತಿದ್ದವು. ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ಮೊದಲ ದಿನದಿಂದಲೇ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದರೆ, ನಗರ ಪ್ರದೇಶದಲ್ಲಿ ಆ್ಯಪ್‌ ಸರ್ವರ್ ಸ್ಪಂದಿಸದಿರುವುದೇ ದೊಡ್ಡ ತೊಂದರೆಯಾಯಿತು. ಪರಿಣಾಮವಾಗಿ, ಸಮೀಕ್ಷೆದಾರರು ಒಂದು ಮನೆಯಲ್ಲೇ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಸಂಜೆವರೆಗೆ ಬೆರಳೆಣಿಕೆಯಷ್ಟು ಸಮೀಕ್ಷೆಗಳನ್ನಷ್ಟೇ ನಡೆಸಲು ಸಾಧ್ಯವಾಯಿತು.

ಸಮೀಕ್ಷೆಯ ಮೊದಲ ಹಂತದಲ್ಲೇ ಕೆಲ ಸಮಸ್ಯೆಗಳು ಎದುರಾದವು. ಒಂದು ಮನೆಯಲ್ಲಿ ಮಾಲೀಕರು ಸಮೀಕ್ಷೆದಾರರನ್ನು ಒಳಗೆ ಬಿಟ್ಟಿಲ್ಲ. ಈ ಹಿಂದೆ ಕೆಲವರು ಬಂದು ಪ್ರಶ್ನೆ ಮಾಡಿ ಹೋಗಿದ್ದರು, ಈಗ ಮತ್ತೆ ಯಾಕೆ? 60 ಪ್ರಶ್ನೆಗಳ ಪಟ್ಟಿ ಮೊದಲು ಕೊಡಿ ಎಂದು ಕೇಳಿದರು. ಆದರೆ ಪ್ರಶ್ನೆಗಳ ಪ್ರತಿ ಅವರ ಬಳಿ ಇರಲಿಲ್ಲ. ಮತ್ತೊಂದು ಮನೆಯಲ್ಲಿ ರೇಷನ್ ಕಾರ್ಡ್ ತೋರಿಸಲು ಹಿಂಜರಿತವಿದ್ದರೂ ಕೊನೆಗೆ ನೀಡಿದರು, ಆದರೆ ಫೋಟೋ ಅಪ್‌ಲೋಡ್ ಆಗಲಿಲ್ಲ. ಕೆಲವೆಡೆ ಆಧಾರ್ ಮಾಹಿತಿ ದಾಖಲಿಸಲು ಆ್ಯಪ್ ಸ್ಪಂದಿಸಲಿಲ್ಲ. ಜನರು ಮಾಹಿತಿ ನೀಡಲು ಸಿದ್ದರಾಗಿದ್ದರೂ, ಆ್ಯಪ್ ಕೆಲಸ ಮಾಡದ ಕಾರಣ ಸಮೀಕ್ಷೆ ಮುಂದುವರಿಯಲಿಲ್ಲ. ನಾವು ಕಾಯಲು ಸಿದ್ದರಿದ್ದರೂ, ಜನರು ಹೆಚ್ಚು ಸಮಯ ಕಾಯಲು ಸಿದ್ದರಿರಲಿಲ್ಲ ಎಂದು ಸಮೀಕ್ಷೆದಾರರು ಅಸಹಾಯಕತೆಯ ಭಾವನೆ ವ್ಯಕ್ತಪಡಿಸಿದರು.

ಸಿದ್ದಾರ್ಥನಗರದ ಕೇಂದ್ರೀಯ ವಿದ್ಯಾಲಯದ ಸಮೀಪದ ಬಡಾವಣೆಯಲ್ಲಿ ಯುನಿಕ್ ಐಡೆಂಟಿಫಿಕೇಶನ್ ಸ್ಟಿಕ್ಕರ್‌ಗಳನ್ನು ಅಂಟಿಸಿದ ಮೂವರು ಮನೆಗಳಲ್ಲಿ ಎರಡು ಮನೆಗಳು ಖಾಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಕುರಿತು ಯಾವುದೇ ಸ್ಪಷ್ಟ ಸೂಚನೆಗಳಿರಲಿಲ್ಲ. ಈ ನಡುವೆ, ಸಮೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯಾರನ್ನು ಸಂಪರ್ಕಿಸಬೇಕು? ಮೇಲ್ವಿಚಾರಕರು ಯಾರು?” ಎಂಬ ಪ್ರಶ್ನೆಗೆ ಶುಕ್ರವಾರವೂ ಉತ್ತರ ಸಿಗದೆ ಬಿಟ್ಟಿತು. ಸಮೀಕ್ಷೆದಾರರು ಇದ್ದ ವಾಟ್ಸ್‌ಆಪ್‌ ಗುಂಪುಗಳಲ್ಲಿ ದಿನಪೂರ್ತಿ ಈ ಪ್ರಶ್ನೆಗಳೇ ಚರ್ಚೆಯಲ್ಲಿದ್ದವು. ಅಧಿಕಾರಿಗಳು “ಮೇಲ್ವಿಚಾರಕರು ಕರೆ ಮಾಡುತ್ತಾರೆ” ಎಂಬ ಭರವಸೆ ನೀಡಿದ್ದರೂ, ಅದು ಕೂಡ ಈಡೇರಲಿಲ್ಲ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss