ಐರನ್‌ಮ್ಯಾನ್ ಸ್ಪರ್ಧೆ ಗೆದ್ದುಬೀಗಿದ ತೇಜಸ್ವಿ ಸೂರ್ಯಗೆ ‘ಮ್ಯಾನ್ ಆಫ್ ಸ್ಟೀಲ್’ ಎಂದ ಪತ್ನಿ ಶಿವಶ್ರೀ!

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸತತ ಎರಡನೇ ವರ್ಷವೂ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಬಾರಿ ಅವರು ಹಿಂದಿನ ವರ್ಷಕ್ಕಿಂತ 40 ನಿಮಿಷ ವೇಗವಾಗಿ, ಕೇವಲ 7 ಗಂಟೆ 49 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ.

ಪತಿಯ ಈ ಸಾಧನೆ ಕುರಿತು ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ತಮ್ಮ ಸಂತಸವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತೇಜಸ್ವಿ ಸೂರ್ಯ ಅವರನ್ನು ‘ಮ್ಯಾನ್ ಆಫ್ ಸ್ಟೀಲ್’ ಎಂದು ಹಾಡಿ ಹೊಗಳಿದ್ದಾರೆ.

ಎರಡನೇ ಬಾರಿ ಐರನ್‌ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದ ‘ಮ್ಯಾನ್ ಆಫ್ ಸ್ಟೀಲ್’ ನನ್ನ ಪತಿ ತೇಜಸ್ವಿ ಸೂರ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹಿಂದಿನ ಬಾರಿ ಹೋಲಿಸಿದರೆ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿ ತಲುಪಿದ್ದೀರಿ, ಹೆಮ್ಮೆ ಆಗುತ್ತಿದೆ.

ನನ್ನ ವೈಯಕ್ತಿಕ ಕೋಚ್ ಹಾಗೂ ಮುಖ್ಯ ಪ್ರೇರಣಾದಾಯಕರಾಗಿ ನನ್ನ ಐರನ್‌ಮ್ಯಾನ್ ಸರಣಿಯನ್ನು ಮುಂದುವರಿಸಲು ನೀವು ನೆರವಾಗಿದ್ದೀರಿ. ನೀವು ನನ್ನ ಜೀವನದ ಅತ್ಯುತ್ತಮ ವ್ಯಕ್ತಿ. ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದೀರಿ. ಹೀಗಂತ ಶಿವಶ್ರೀ ಸ್ಕಂದಪ್ರಸಾದ್​ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡಿದ್ದರು.

ಇನ್ನು ಶಿವಶ್ರೀ ಸ್ಕಂದಪ್ರಸಾದ್ ಕೂಡಾ ಈ ವರ್ಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 90 ಕಿ.ಮೀ ಸೈಕ್ಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗಮನಸೆಳೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕೆ. ಅಣ್ಣಾಮಲೈ ಕೂಡ ಭಾಗವಹಿಸಿದ್ದು, ಅವರು ಈ ಓಟವನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.

ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ಅವರ ಈ ಸಾಧನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅಭಿನಂದನೆ ಸಲ್ಲಿಸಿದ್ದಾರೆ. ಐರನ್‌ಮ್ಯಾನ್ 70.3 ಸ್ಪರ್ಧೆಯಲ್ಲಿ ನಮ್ಮ ಯುವಕರು ಹೆಚ್ಚಾಗಿ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಇಂತಹ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಪ್ರೇರಣೆ ನೀಡುತ್ತವೆ. ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ಅವರ ಶ್ರಮ ಪ್ರಶಂಸನೀಯ ಎಂದು ಹೇಳಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author