ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಜನ ಸಂಪರ್ಕ ಸಭೆ ನಡೆಸಿ, ನಾಗರಿಕರಿಂದ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಲಾಲ್‌ಬಾಗ್ ಸುರಂಗ ಮಾರ್ಗ ಯೋಜನೆಯ ಬಗ್ಗೆ ಮಾತನಾಡಿದ ಅವರು, ಈ ಯೋಜನೆಯಿಂದ ಲಾಲ್‌ಬಾಗ್‌ಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲಸದ ಅವಧಿಯಲ್ಲಿ ಕೇವಲ ಒಂದು ಎಕರೆ ಪ್ರದೇಶವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತದೆ, ನಂತರ ಅದನ್ನೇ ಮರುಸ್ಥಾಪಿಸಿ ಪಾರ್ಕ್ ಆಗಿ ಜನರಿಗೇ ಹಿಂತಿರುಗಿಸಲಾಗುವುದು ಎಂದರು.
ಸಂಸದ ತೇಜಸ್ವಿ ಸೂರ್ಯ ಅವರ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ನಿರ್ಮಿಸುವುದು ಇಂದಿನ ಅಗತ್ಯ. ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲಿಯೂ ಇಂತಹ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಜನರ ಅನುಕೂಲಕ್ಕಾಗಿ ನಾವು ಈ ಯೋಜನೆ ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.
ಯೋಜನೆಗೆ ಟೀಕೆಗಳು ಬರಬಹುದು, ಆದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜನರ ಹಿತಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ತೇಜಸ್ವಿ ಸೂರ್ಯ ಅವರ ಕುರಿತು ಮಾತನಾಡಿದ ಅವರು, ಅವರದ್ದು ಖಾಲಿ ಟ್ರಂಕ್ ಮಾತು, ಕೆಲಸದ ವಿಷಯದಲ್ಲಿ ಅವರಿಗೆ ತಿಳಿವಳಿಕೆ ಇಲ್ಲ ಎಂದು ತೀವ್ರವಾಗಿ ಟೀಕಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

