Monday, October 27, 2025

Latest Posts

ನಮ್ಮ ಸರ್ಕಾರ ರಚನೆಯಾದರೆ ‘ವಕ್ಫ್ ಮಸೂದೆ’ ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದ ತೇಜಸ್ವಿ ಯಾದವ್!

- Advertisement -

ಬಿಹಾರ ಚುನಾವಣೆಯ ಕಣ ಕಾವೇರಿದೆ. ಈ ಮದ್ಯೆ ಬಿಹಾರ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ, ಕೇಂದ್ರ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.

ಸೀಮಾಂಚಲ ವಿಧಾನಸಭಾ ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ಪ್ರಚಾರ ನಡೆಸಿದ್ದಾರೆ. ಈ ಚುನಾವಣೆಯು ಸಂವಿಧಾನ ಮತ್ತು ಬಹುತ್ವವನ್ನು ಸಂರಕ್ಷಿಸುವ ಹೋರಾಟ ಎಂದಿದ್ದಾರೆ. ನಮ್ಮ ಸರ್ಕಾರ ರಚನೆಯಾದರೆ, ಆ ವಕ್ಫ್ ಮಸೂದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಇದು ಸಂವಿಧಾನಿಕ ಸಮಾನತೆಯ ಮೇಲೆ ನಡೆದಿರುವ ನೇರ ದಾಳಿ ಎಂದು ಅವರು ಘೋಷಿಸಿದರು.

ದೇಶವು ಎಲ್ಲ ಧರ್ಮಗಳ ಜನರ ಸಹಭಾಗಿತ್ವದಿಂದ ನಿರ್ಮಿತವಾಗಿದೆ ಎಂದು ನೆನಪಿಸಿದರು. ಈ ದೇಶ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರಿಗೂ ಸೇರಿದೆ. ಎಲ್ಲರೂ ಈ ರಾಷ್ಟ್ರ ನಿರ್ಮಾಣದಲ್ಲಿ ತ್ಯಾಗ ಮಾಡಿದ್ದಾರೆ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ ಎಂದು ಕಿಶನ್‌ಗಂಜ್ ರ್ಯಾಲಿಯಲ್ಲಿ ಹೇಳಿದರು.

ಏಪ್ರಿಲ್‌ನಲ್ಲಿ ಸಂಸತ್ತು ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆಗೆ, ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ಈ ಕಾಯ್ದೆಯು ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿಗಳ ಮೇಲಿನ ವ್ಯಾಪಕ ಅಧಿಕಾರ ನೀಡುತ್ತಿದ್ದರೆ, ವಕ್ಫ್ ಸ್ಥಾಪನೆಗೆ ಇಸ್ಲಾಂನಲ್ಲಿ ಐದು ವರ್ಷಗಳ ಅಧ್ಯಯನವನ್ನು ಕಡ್ಡಾಯಗೊಳಿಸುವ ನಿಬಂಧನೆ ವಿವಾದಕ್ಕೆ ಕಾರಣವಾಗಿತ್ತು.

ತೇಜಸ್ವಿ ಯಾದವ್ ತಮ್ಮ ಭಾಷಣಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದರು. ನಿತೀಶ್ ಕುಮಾರ್ ಬಿಜೆಪಿಗೆ ಮತ್ತು ಆರ್‌ಎಸ್‌ಎಸ್‌ಗೆ ಬಿಹಾರದಲ್ಲಿ ಜಾಗ ಮಾಡಿಕೊಟ್ಟಿದ್ದಾರೆ. ಬಿಹಾರದಲ್ಲಿ ಕೋಮುವಾದಿ ಶಕ್ತಿಗಳಿಗೆ ಬಾಗಿಲು ತೆರೆಯುವ ಕೆಲಸ ಅವರದ್ದೇ ಎಂದು ಟೀಕಿಸಿದ್ದಾರೆ.

ತಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿದ ಯಾದವ್, ಆರ್‌ಜೆಡಿ ಎಂದಿಗೂ ತನ್ನ ಧೋರಣೆಯ ಮೇಲೆ ರಾಜಿ ಮಾಡಿಕೊಳ್ಳಲಿಲ್ಲ. ಲಾಲುಜಿ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಿರಲಿಲ್ಲ. ಆದರೆ ಇಂದು ನಮ್ಮ ಚಿಕ್ಕಪ್ಪ ನಿತೀಶ್ ಕುಮಾರ್ ಅವರು ತಮ್ಮ ದಾರಿ ಬದಲಿಸಿಕೊಂಡು ಬಿಜೆಪಿಯತ್ತ ಹೋಗಿದ್ದಾರೆ ಎಂದು ಹೇಳಿದರು.

ಕೇಂದ್ರ ಏಜೆನ್ಸಿಗಳನ್ನು ರಾಜಕೀಯವಾಗಿ ದುರುಪಯೋಗ ಮಾಡುತ್ತಿರುವ ಆರೋಪವನ್ನೂ ಅವರು ಹೊರಹಾಕಿದರು. ಅಮಿತ್ ಶಾ ಅವರು ಪಾಟ್ನಾದಲ್ಲಿ ನನಗೆ ನೇರ ಬೆದರಿಕೆ ಹಾಕಿದ್ದಾರೆ. ‘ತೇಜಸ್ವಿಗೆ ಪಾಠ ಕಲಿಸುತ್ತೇವೆ’ ಎಂದು ಹೇಳಿದರು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ತೇಜಸ್ವಿ ಯಾದವ್ ಸ್ಪಷ್ಟಪಡಿಸಿದರು. ಬಿಹಾರದಲ್ಲಿ ನಡೆಯಲಿರುವ ಚುನಾವಣೆಗೆ ತೇಜಸ್ವಿ ಯಾದವ್ ಅವರ ಈ ಘೋಷಣೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss