ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಡಿಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ತೆರಳಿದ್ದ ಕರ್ನಾಟಕ ರಾಜ್ಯ ಪೊಲೀಸರ ಮತ್ತು ತೆಲಂಗಾಣ ಪೊಲೀಸರ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.
ಗುರುಮಠಕಲ್ ಸಮೀಪದ ಚೆಲ್ಲೇರಿ ಗ್ರಾಮದ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ವಿರುದ್ಧ ಕಾರ್ಯಾಚರಣೆ ನಡೆಸಲು ಕರ್ನಾಟಕ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ತೆಲಂಗಾಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಡಿ ವಿಚಾರ ಮುಂದಿಟ್ಟು ರಾಜ್ಯ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.
ಚೆಲ್ಲೇರಿ ದೊಡ್ಡಹಳ್ಳಿ ಪ್ರದೇಶವು ಕರ್ನಾಟಕ–ತೆಲಂಗಾಣ ಉಭಯ ರಾಜ್ಯಗಳ ಗಡಿಯಲ್ಲಿದೆ. ಆದರೆ ಈ ಪ್ರದೇಶ ತೆಲಂಗಾಣಕ್ಕೆ ಸೇರಿದೆ ಎಂದು ಕೆಲ ತೆಲಂಗಾಣ ಪೊಲೀಸ್ ಸಿಬ್ಬಂದಿ ವಾದಿಸಿದ್ದು, ಇದರಿಂದ ಗಡಿ ವಿವಾದ ಮತ್ತೊಮ್ಮೆ ಭುಗಿಲೆದ್ದಂತಾಯಿತು.
ತೆಲಂಗಾಣದ ಕೆಲವರು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸೈದಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಾನಂದ ಎಂ. ಮರಡಿ ಅವರ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು. ಈ ವೇಳೆ ಎರಡೂ ರಾಜ್ಯಗಳ ಪೊಲೀಸರೊಂದಿಗೆ ಸ್ಥಳೀಯರ ಮಧ್ಯೆಯೂ ವಾಗ್ವಾದ ಉಂಟಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಆದರೆ ಸೈದಾಪುರ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯಾಚರಣೆ ಮುಂದುವರಿಸಿ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ತೆಲಂಗಾಣ ಮೂಲದ ಮೂರು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮಾತಿನ ಚಕಮಕಿ ಬಳಿಕ ತೆಲಂಗಾಣ ಪೊಲೀಸರು ಸ್ಥಳದಿಂದ ಹಿಂತಿರುಗಿದ್ದಾರೆ ಎನ್ನಲಾಗಿದೆ.
ವರದಿ : ಲಾವಣ್ಯ ಅನಿಗೋಳ




