ಕೇರಳದಲ್ಲಿ ನಿರಂತರ ಮಳೆಯಾಗುತ್ತಿದೆ. ನದಿಗಳಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಕೇರಳದಾದ್ಯಂತ ಶೀತಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ವಯನಾಡು, ಕಾಸರಗೋಡು, ಕಣ್ಣೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಜಿಲ್ಲೆಗಳಲ್ಲಿ, ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ತ್ರಿಶೂಲ್ ಜಿಲ್ಲೆಯಲ್ಲಿ ಪ್ರತಿಕೂಲ ಹವಾಮಾನ ಕಾರಣ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತ್ರೈಮಾಸಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಂತ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಹೇಳಿದ್ದಾರೆ. ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು, ಶೀಘ್ರವೇ ಪ್ರಕಟಿಸಲಾಗುತ್ತದೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.
ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ, 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ.
ಹೀಗಾಗಿ ಅಣೆಕಟ್ಟುಗಳ ಹೊರಹರಿವು ಹೆಚ್ಚಾಗಿದೆ. ನದಿ ತೀರದ ಪ್ರದೇಶಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನದಿ ತೀರದಲ್ಲಿ ವಾಸಿಸುವವರು, ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.