ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡ್ತಿಲ್ಲ ಅನ್ನೋ ರಾಜ್ಯ ಸರ್ಕಾರದ ಆರೋಪಗಳಿಗೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ಅನ್ಯಾಯವಾಗಿದೆ ಎಂದು ಇನ್ನೂ ಎಷ್ಟು ದಿವಸ ಹೇಳ್ತೀರಾ? ಪದೇ ಪದೇ ಕೇಂದ್ರ ಸರ್ಕಾರದ ಜೊತೆ ಘರ್ಷಣೆಗೆ ಹೋಗಬೇಡಿ. ಘರ್ಷಣೆಗೆ ಹೋಗೋದ್ರಿಂದ ಏನೂ ಸಿಗೋದಿಲ್ಲ. ವಿಶ್ವಾಸದಿಂದ ಇರಿ. ನಾನು ಕೇಂದ್ರದ ಮಂತ್ರಿಯಾಗಿದ್ದೇನೆ. ನನಗೆ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವೂ ಇದೆ, ನಂಬಿಕೆಯೂ ಇದೆ. ನೀವು ಸರಿಯಾದ ರೀತಿಯಲ್ಲಿ ಬಂದು, ವಿಶ್ವಾಸದಲ್ಲಿ ನೆರೆ ಅನಾಹುತಗಳ ಬಗ್ಗೆ ಹೇಳಿ, ನೆರವು ನೀಡಿ ಅಂತಾ ಕೇಳಿ. ಸೌಜನ್ಯದ ಮೂಲಕ ಚರ್ಚೆ ಮಾಡಿ.
ಬೆಂಗಳೂರಲ್ಲಿ ಮಾಧ್ಯಮದ ಮುಂದೆ ಕುಳಿತು, ಇದೇ ರೀತಿ ಎಷ್ಟು ದಿನ ಹೇಳ್ತೀರಾ? ನಾನೂ ಎರಡೂ ಬಾರಿ ಸಿಎಂ ಆದೆ. ಮೊದಲ ಬಾರಿಗೆ ಬಿಜೆಪಿ ಜೊತೆ ಇದ್ದೆ. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಬಾಂಧವ್ಯ ಉಳಿಸಿಕೊಂಡು ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಧರ್ಮ.
ನಿಮ್ಮ ಒರಟು ಮಾತುಗಳನ್ನು ಬಿಡಿ. ಯಾರಾದರೂ ರಾಜ್ಯ ಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೀರಾ? ಕೇಂದ್ರದಿಂದ ನಿಯೋಗ ಕಳಿಸಿ ಅನ್ನೋ ಮನವಿಯನ್ನಾದ್ರೂ ಕೊಟ್ಟಿದ್ದೀರಾ? ರಾಜ್ಯದಲ್ಲಿ ಜಾತಿಗಣತಿ ಮಾಡ್ತಿದ್ದಾರೆ. ಬರೀ ಬೇಕಿಲ್ಲದೇ ಇರೋ ವಿಷಯಗಳನ್ನೇ ಮಾಡ್ತಿದ್ದೀರಾ? ಕಳೆದ 2 ವರ್ಷದಿಂದ ಸಿಎಂ ಸ್ಥಾನ ವಿಚಾರವಾಗೇ ಕಾಲ ಕಳೆದಿದ್ದೀರಿ. 2 ಸಾವಿರ ಕೊಟ್ಟ ತಕ್ಷಣ, ಕುಟುಂಬಗಳು ನೆಮ್ಮದಿಯಾಗಿ ಬದುಕಲು ಸಾಧ್ಯಾನಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದು, ಕಾಂಗ್ರೆಸ್ಸಿರ ಕಾಲೆಳೆದಿದ್ದಾರೆ.