ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಗಳನ್ನು ಮರುಪ್ರಾರಂಭಿಸಲು ತೀರ್ಮಾನಿಸಿದ್ದು, ಜೊತೆಗೆ ನೇರ ನೇಮಕಾತಿಗಳ ಗರಿಷ್ಠ ವಯೋಮಿತಿಯನ್ನು, ಒಂದು ಬಾರಿಗೆ ಮಾತ್ರ, 2 ವರ್ಷಗಳಷ್ಟು ಸಡಿಲಿಸುವ ಆದೇಶ ಹೊರಡಿಸಲಾಗಿದೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನಿಯೋಗದ ಶಿಫಾರಸುಗಳನ್ನು ಅನುಸರಿಸಿ , ಪರಿಶಿಷ್ಟ ಜಾತಿಗಳ ಮೀಸಲಾತಿ ಪರಿಷ್ಕರಣೆ ಹಿನ್ನೆಲೆಯಲ್ಲಿ, 2024ರ ಅಕ್ಟೋಬರ್ 28ರಂದು ನೇಮಕಾತಿ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಈಗ ಸರ್ಕಾರವು ಪರಿಷ್ಕೃತ ಮೀಸಲಾತಿ ನೀತಿಯನ್ನು ಜಾರಿಗೆ ತಂದು, ಆ ನೇಮಕಾತಿ ಪ್ರಕ್ರಿಯೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 6ರಂದು ಹೊರಡಿಸಿದ ಸರ್ಕಾರದ ಆದೇಶದ ಪ್ರಕಾರ, ರಾಜ್ಯ ಸಿವಿಲ್ ಸೇವೆಗಳ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷದ ಸಡಿಲಿಕೆ ಅನ್ವಯವಾಗಲಿದೆ. ಈ ನಿಯಮವು ಶನಿವಾರದಿಂದ ಹಿಡಿದು 2027ರ ಡಿಸೆಂಬರ್ 31ರವರೆಗೆ ಹೊರಬರುವ ನೇಮಕಾತಿ ಅಧಿಸೂಚನೆಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಕೋವಿಡ್ ಹಾಗೂ ಇತರ ಕಾರಣಗಳಿಂದ ವಯೋಮಿತಿ ಮೀರಿ ಅವಕಾಶ ತಪ್ಪಿಸಿಕೊಂಡಿದ್ದವರಿಗೆ ಮತ್ತೊಂದು ಅವಕಾಶ ಒದಗಿಸುವಂತಾಗಿದೆ.
ಪರಿಷ್ಕೃತ ಮೀಸಲಾತಿ ನೀತಿಯ ಪ್ರಕಾರ, ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಸೇರಿಸಲಾಗಿದೆ. ಪ್ರವರ್ಗ ಎಗೆ ಶೇಕಡ 6 ಮೀಸಲಾತಿ, ಪ್ರವರ್ಗ ಬಿಗೆ ಶೇಕಡ 6 ಹಾಗೂ ಪ್ರವರ್ಗ ಸಿಗೆ ಶೇಕಡ 5 ಮೀಸಲಾತಿ ನಿಗದಿಪಡಿಸಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ