ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸೊಸೈಟಿ (TAPCMS) ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 14 ನಿರ್ದೇಶಕ ಸ್ಥಾನಗಳಲ್ಲಿ 11 ಸ್ಥಾನಗಳನ್ನು ಮೈತ್ರಿಕೂಟ ವಶಪಡಿಸಿಕೊಂಡಿದ್ದು, ಕಾಂಗ್ರೆಸ್‌ಗೆ ಕೇವಲ 3 ಸ್ಥಾನ ಸಿಕ್ಕಿದೆ. ಈ ಫಲಿತಾಂಶ ಕಾಂಗ್ರೆಸ್‌ಗೆ ಭಾರೀ ಮುಖಭಂಗ ತಂದಿದೆ.
ಈ ಗೆಲುವಿಗೆ ಶಾಸಕ ಎಚ್.ಟಿ. ಮಂಜು ಅವರ ನಾಯಕತ್ವ ಕಾರಣವಾಗಿದ್ದು, ಸರ್ಕಾರದ ವಿರುದ್ಧದ ಅಸಮಾಧಾನವೂ ಪರಿಣಾಮ ಬೀರಿದೆ. ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜ್ ಸೋತಿದ್ದು, ಮಂಜು ಅವರ ಸಹೋದರ ಎಚ್.ಟಿ. ಲೋಕೇಶ್ ಗೆಲುವು ಸಾಧಿಸಿದ್ದಾರೆ.
ಸೆಪ್ಟೆಂಬರ್ 28ರಂದು ನಡೆದ ಚುನಾವಣೆಗೆ 41 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೈತ್ರಿಕೂಟದ ಅಭ್ಯರ್ಥಿಗಳಲ್ಲಿ ಎ-ತರಗತಿಯಲ್ಲಿ ವಿ.ಡಿ. ಹರೀಶ್, ಬಿ.ಎಮ್. ಕಿರಣ್, ಕುರುಬಹಳ್ಳಿ ಕೆ.ಬಿ. ನಾಗೇಶ್, ಆಲಂಬಾಡಿ ಎ.ಟಿ. ಕರಿಶೆಟ್ಟಿ, ಟಿ. ಬಲದೇವ್ ಹಾಗೂ ಎಚ್.ಟಿ. ಲೋಕೇಶ್ ಗೆಲುವು ದಾಖಲಿಸಿದ್ದಾರೆ. ಬಿ-ತರಗತಿಯ ಸಾಮಾನ್ಯ ಕ್ಷೇತ್ರದಿಂದ ಎಸ್.ಎಲ್. ಮೋಹನ್, ಕಿಕ್ಕೇರಿ ಕೆ.ಬಿ. ಮಧು, ಮಹಿಳಾ ಮೀಸಲು ಸ್ಥಾನದಿಂದ ಎಂ.ಡಿ. ಜ್ಯೋತಿ, ಬಂಡಿಹೊಳೆ ಬಿ.ಆರ್. ಲತಾಮಣಿ ಮಂಜುನಾಥ್, ಹಿಂದುಳಿದ ವರ್ಗದಿಂದ ಬೀಕನಹಳ್ಳಿ ಈರೇಗೌಡ ಮತ್ತು ನಾಗರಘಟ್ಟ ದಿಲೀಪ್ ಕುಮಾರ್ ಗೆದ್ದಿದ್ದಾರೆ.
ಫಲಿತಾಂಶ ಹೊರಬಂದ ತಕ್ಷಣ ಕೆ.ಆರ್.ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು. ಗೆದ್ದ ನಿರ್ದೇಶಕರನ್ನು ಸನ್ಮಾನಿಸಿದ ಶಾಸಕ ಎಚ್.ಟಿ. ಮಂಜು, “ಈ ಗೆಲುವು ಕೇವಲ ಚುನಾವಣೆ ಜಯವಲ್ಲ, ನಮ್ಮ ಸೇವೆಯ ಮೇಲೆ ಮತದಾರರ ವಿಶ್ವಾಸದ ಪ್ರತೀಕ” ಎಂದರು. ಸರ್ಕಾರದ ಮಂತ್ರಿಯೇ ಪ್ರಚಾರಕ್ಕೆ ಬಂದಿದ್ದರೂ ಮತದಾರರು ಜೆಡಿಎಸ್ ಕೈ ಹಿಡಿದಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಮಂಡ್ಯ ಜಿಲ್ಲೆಯ ಹೈ-ವೋಲ್ಟೇಜ್ ಕ್ಷೇತ್ರ. ಇಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಯಾವಾಗಲೂ ತೀವ್ರ ಪೈಪೋಟಿ ಇರುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಜು ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 2019ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಸಚಿವರಾಗಿದ್ದ ಮಂಜು, ಇದೀಗ TAPCMS ಚುನಾವಣೆಯಲ್ಲೂ ಮೈತ್ರಿಯ ಶಕ್ತಿಯನ್ನು ತೋರಿಸಿದ್ದಾರೆ. ಈ ಮೈತ್ರಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮುಂದುವರಿಯಲಿದೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ.
ಸರ್ಕಾರದ ಅಧಿಕಾರವಿದ್ದರೂ ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಬಿ.ಎಲ್. ದೇವರಾಜ್ ಬಣ ಸೋಲು ಕಂಡಿದೆ. TAPCMS ಮೇಲೆ ಮೈತ್ರಿಕೂಟದ ಆಧಿಪತ್ಯ ಸ್ಥಾಪನೆಯಾಗಿದ್ದು, ಕೃಷಿಕರ ಸಮಸ್ಯೆ ಹಾಗೂ ಮಾರುಕಟ್ಟೆಯ ಸುಧಾರಣೆ ಕುರಿತ ಕಾರ್ಯತಂತ್ರಗಳಿಗೆ ಇದೀಗ ಜೆಡಿಎಸ್-ಬಿಜೆಪಿ ಬಲ ನೀಡಲಿದೆ. ಒಟ್ಟಾರೆ, ಕೆ.ಆರ್.ಪೇಟೆಯ TAPCMS ಚುನಾವಣಾ ಫಲಿತಾಂಶ ಸರ್ಕಾರಕ್ಕೆ ಬಿರುಸಿನ ಧಕ್ಕೆ ನೀಡಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಗೆ ಹೊಸ ಶಕ್ತಿ ತುಂಬಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ